ಇಂಫಾಲ : ಮಣಿಪುರದಲ್ಲಿ ಇದೇ ವರ್ಷದ ಮೇ ತಿಂಗಳಿಂದ ಆರಂಭವಾದ ಭೀಕರ ಹಿಂಸಾಚಾರದಲ್ಲಿ ಇದುವರೆಗೆ ಕನಿಷ್ಠ 175 ಮಂದಿ ಸಾವನ್ನಪ್ಪಿದ್ದು, 1108 ಮಂದಿ ಗಾಯಗೊಂಡಿದ್ದಾರೆ. 32 ಮಂದಿ ನಾಪತ್ತೆಯಾಗಿದ್ದಾರೆ. ಹಾಗೆಯೇ, ಒಟ್ಟು 4,786 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. 386 ಧಾರ್ಮಿಕ ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಐಜಿಪಿ (Operations) ಐ.ಕೆ.ಮುಯಿವಾ, "ಮಣಿಪುರದಲ್ಲಿ ಉಂಟಾಗಿರುವ ಬುಡಕಟ್ಟು ಸಮುದಾಯಗಳ ಹಿಂಸಾಚಾರವನ್ನು ನಿಯಂತ್ರಿಸಿ ಸಹಜಸ್ಥಿತಿಗೆ ತರಲು ಪೊಲೀಸರು, ಕೇಂದ್ರ ಪಡೆಗಳು ಮತ್ತು ನಾಗರಿಕ ಆಡಳಿತವು ಹಗಲಿರುಳು ಶ್ರಮವಹಿಸಿ ಪ್ರಯತ್ನಿಸುತ್ತಿದೆ. ಈ ಬಗ್ಗೆ ನಾವು ಸಾರ್ವಜನಿಕರಿಗೆ ಭರವಸೆ ನೀಡುತ್ತಿದ್ದೇವೆ. ಕಳೆದುಹೋದ ಶಸ್ತ್ರಾಸ್ತ್ರಗಳ ಪೈಕಿ 1,359 ಬಂದೂಕುಗಳು ಮತ್ತು 15,050 ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಹೇಳಿದರು.
ಹಿಂಸಾಚಾರದ ಸಮಯದಲ್ಲಿ ಗಲಭೆಕೋರರು ಹೆಚ್ಚಿನ ಸಂಖ್ಯೆಯ ಪೊಲೀಸ್ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಲೂಟಿ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಅವಧಿಯಲ್ಲಿ ಕನಿಷ್ಠ 5,172 ಅಗ್ನಿಸ್ಪರ್ಶ ಪ್ರಕರಣಗಳನ್ನು ದಾಖಲಿಸಲಾಗಿದೆ. 254 ಚರ್ಚ್‌ಗಳು ಹಾಗೂ 132 ದೇವಾಲಯಗಳು ಸೇರಿದಂತೆ 386 ಧಾರ್ಮಿಕ ಸ್ಥಳಗಳನ್ನು ಧ್ವಂಸಗೊಳಿಸಲಾಗಿದೆ. ಬಿಷ್ಣುಪುರ ಜಿಲ್ಲೆಯ ಫೌಗಕ್‌ಚಾವೊ ಇಖೈಯಿಂದ ಚುರಚಂದಪುರ ಜಿಲ್ಲೆಯ ಕಾಂಗ್‌ವೈ ವರೆಗಿನ ಭದ್ರತಾ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಲಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭದ್ರತೆಯನ್ನು ಒದಗಿಸಲಾಗಿದೆ ಎಂದರು.
ಇದನ್ನೂ ಓದಿ :ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ : ಎರಡು ಗುಂಪುಗಳ ನಡುವೆ ಗುಂಡಿನ ದಾಳಿ.. 72 ಗಂಟೆಯಲ್ಲಿ 8 ಸಾವು, 18 ಜನರಿಗೆ ಗಾಯ!