ಪ್ರಯಾಗರಾಜ್ (ಉತ್ತರ ಪ್ರದೇಶ): ಒಂದೆಡೆ ದೇಶದಲ್ಲಿ ನಿಧಾನವಾಗಿ ಕೊರೊನಾ ಸೋಂಕು ಮತ್ತೆ ಏರಿಕೆಯಾಗುತ್ತಿದೆ. ಮತ್ತೊಂದೆಡೆ, ಸಾಂಕ್ರಾಮಿಕ ರೋಗಗಳೂ ಹೆಚ್ಚುತ್ತಿದ್ದು, ಮಕ್ಕಳೇ ಜಾಸ್ತಿ ತುತ್ತಾಗುತ್ತಿದ್ದಾರೆ.
ದೀರ್ಘಕಾಲದ ಕಾಯಿಲೆಗಳು ಮತ್ತು ವೈರಲ್ ಜ್ವರದಿಂದ ಬಳಲುತ್ತಿರುವ 171 ಮಕ್ಕಳನ್ನು ಪ್ರಯಾಗರಾಜ್‌ನ ಮೋತಿಲಾಲ್ ನೆಹರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಇರುವುದೇ 120 ಹಾಸಿಗೆಗಳು. ಆದ್ರೆ ಈಗ 171 ಮಕ್ಕಳು ದಾಖಲಾಗಿದ್ದಾರೆ. ಒಂದೇ ಬೆಡ್ನಲ್ಲಿ 2-3 ಮಕ್ಕಳನ್ನು ಇರಿಸಿ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಇದೆ.
ಡೆಂಗ್ಯೂ ಪ್ರಕರಣಗಳು ಇಲ್ಲಿ ಕಡಿಮೆಯಿದೆ. ಎನ್ಸೆಫಾಲಿಟಿಸ್ ಮತ್ತು ನ್ಯುಮೋನಿಯಾದಿಂದ ಬಳಲುತ್ತಿರುವ ಮಕ್ಕಳು ಹೆಚ್ಚಿದ್ದಾರೆ. ಅವರಿಗೆ ಇಲ್ಲಿ ಆಮ್ಲಜನಕದ ಅವಶ್ಯಕತೆಯಿದೆ. 200 ಹಾಸಿಗೆಗಳ ವಾರ್ಡ್ ನಿರ್ಮಾಣ ಹಂತದಲ್ಲಿದೆ. ನಾವು ಮಕ್ಕಳಿಗೆ ಎಲ್ಲಾ ರೀತಿಯ ಚಿಕಿತ್ಸೆ ಒದಗಿಸುತ್ತಿದ್ದೇವೆ. ಪ್ರವಾಹಪೀಡಿತ ಪ್ರದೇಶಗಳಲ್ಲಿ ಪ್ರವಾಹ ಕಡಿಮೆಯಾದ ಮೇಲೆ ಮಕ್ಕಳಿಗೆ ವೈರಲ್ ಫೀವರ್ ಬಾಧಿಸುತ್ತಿದೆ ಎಂದು ಮೋತಿಲಾಲ್ ನೆಹರು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ನಾನಕ್ ಸರನ್ ತಿಳಿಸಿದರು.