ನವದೆಹಲಿ : 2016-2020 ರ ನಡುವೆ ನಡೆದ ಚುನಾವಣೆಯ ಸಂದರ್ಭಗಳಲ್ಲಿ 170 ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಇತರ ಪಕ್ಷಗಳಿಗೆ ಸೇರ್ಪಡೆಯಾಗಿದ್ದು, ಕೇವಲ 18 ಬಿಜೆಪಿ ಶಾಸಕರು ಮಾತ್ರ ಈ ಅವಧಿಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ಪಕ್ಷ ತೊರೆದಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ನ ಸಮೀಕ್ಷಾ ವರದಿಯಿಂದ ತಿಳಿದು ಬಂದಿದೆ.
ಎಡಿಆರ್ನ ಹೊಸ ವರದಿ ಪ್ರಕಾರ, 2016-20ರ ನಡುವೆ ರಾಜಕೀಯ ಪಕ್ಷಗಳನ್ನು ಬದಲಾಯಿಸಿದ 405 ಶಾಸಕರ ಪೈಕಿ, 182 ಮಂದಿ ಭಾರತೀಯ ಜನತಾ ಪಕ್ಷ (ಬಿಜೆಪಿ), 38 ಮಂದಿ ಕಾಂಗ್ರೆಸ್ ಹಾಗೂ 25 ಮಂದಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಗೆ ಸೇರ್ಪಡೆಗೊಂಡಿದ್ದಾರೆ.
2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಐವರು ಲೋಕಸಭಾ ಸದಸ್ಯರು ಬಿಜೆಪಿ ತೊರೆದು ಇತರ ಪಕ್ಷಗಳಿಗೆ ಸೇರ್ಪಡೆಗೊಂಡಿದ್ದು, 2016-20 ನಡುವೆ ಏಳು ಮಂದಿ ರಾಜ್ಯಸಭಾ ಸದಸ್ಯರು ಕಾಂಗ್ರೆಸ್ ತೊರೆದು ಬೇರೆ ಪಕ್ಷಗಳತ್ತ ಮುಖ ಮಾಡಿದ್ದಾರೆ. 2016-20 ರ ನಡುವೆ 170 ಕಾಂಗ್ರೆಸ್ ಶಾಸಕರು ಮತ್ತು 18 ಬಿಜೆಪಿ ಶಾಸಕರು ಪಕ್ಷ ತೊರದಿದ್ದಾರೆ ಎಂದು ವರದಿ ತಿಳಿಸಿದೆ.