ಬಾರ್ಮೆರ್(ರಾಜಸ್ಥಾನ):ಬಂದೂಕು ಹಿಡಿದ ಬೇಟೆಗಾರರು ಕಾಡು ಪ್ರಾಣಿಯೊಂದನ್ನು ಬೇಟೆಯಾಡಲು ಯತ್ನಿಸುತ್ತಿದ್ದಾಗ, 17 ವರ್ಷದ ಬಾಲಕನೋರ್ವ ಅದನ್ನು ತಪ್ಪಿಸಿದ ಘಟನೆ ರಾಜಸ್ತಾನದ ಬಾರ್ಮೆರ್ ಜಿಲ್ಲೆಯ ಖರದಾ ಭರತ್ಸಿಂಗ್ ಗ್ರಾಮದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಬ್ಬರು ಬೇಟೆಗಾರರು ಚಿಂಕರಾ (ಜಿಂಕೆ ರೀತಿಯ ಪ್ರಾಣಿ) ಅನ್ನು ಬೇಟೆಯಾಡಲು ಪ್ರಯತ್ನಿಸುತ್ತಿದ್ದಾರೆಂದು ತಿಳಿದಾಗ ಅಲ್ಲಿಗೆ ತೆರಳಿದ ಬಾಲಕ ಜುಜ್ಹಾರ್ ಸಿಂಗ್, ಅವರ ಬಳಿ ಬಂದೂಕು ಇರುವುದನ್ನೂ ಪರಿಗಣಿಸದೇ ವಿಡಿಯೋ ಚಿತ್ರೀಕರಣ ಮಾಡಲು ಮುಂದಾದ್ದಾನೆ. ಇದೇ ವೇಳೆ ಕಾಡು ಪ್ರಾಣಿಯನ್ನು ಬೇಟೆಯಾಡದಂತೆ ಎಚ್ಚರಿಕೆ ನೀಡಿದ್ದಾನೆ. ಈ ವೇಳೆ ಅಪಾಯವನ್ನರಿತ ಬೇಟೆಗಾರರು ಪದೇ ಪದೇ ಕ್ಷಮೆಯಾಚನೆ ಮಾಡಿದ್ದು, ನಂತರ ಸ್ಥಳದಿಂದ ಪರಾರಿಯಾದರು.
ಜೂನ್ 10 ರಂದು ಈ ಘಟನೆ ನಡೆದಿರಬಹುದು ಎಂದು ಅಂದಾಜು ಮಾಡಲಾಗಿದೆ. ವನ್ಯಪ್ರೇಮಿಗಳು ಬಾರ್ಮೆರ್ ಅರಣ್ಯ ಇಲಾಖೆಗೆ ಈ ವಿಡಿಯೋ ತಲುಪಿಸಿದ್ದು, ಬೇಟೆಗಾರರನ್ನು ಹಿಡಿಯುವಂತೆ ಒತ್ತಾಯಿಸಿದ್ದಾರೆ.