ಹೈದರಾಬಾದ್ (ತೆಲಂಗಾಣ): ಬಿಸಿಲಿನ ಹೊಡೆತಕ್ಕೆ ತೆಲಂಗಾಣ ಕಂಗಾಲಾಗಿದೆ. ಕಳೆದ ನಾಲ್ಕು ವಾರದಲ್ಲಿ ರಾಜ್ಯಾದ್ಯಂತ ಕೃಷಿ ಮತ್ತು ಕೂಲಿ ಕಾರ್ಮಿಕರು ಸೇರಿ 17 ಜನ ಸಾವನ್ನಪ್ಪಿದ್ದಾರೆ. ಇದರ ನಡುವೆ ಬುಧವಾರ ಬೆಳಗಿನ ಜಾವ ಭಾರಿ ಮಳೆಯಾಗಿದ್ದು, ಜನರಲ್ಲಿ ಕೊಂಚ ನೆಮ್ಮದಿ ಮೂಡಿಸಿದಂತೆ ಆಗಿದೆ.
ಬಿಸಿಲ ಝಳಕ್ಕೆ ಮಂಗಳವಾರ ಒಂದೇ ದಿನದಲ್ಲಿ ಬೇರೆ - ಬೇರೆ ಜಿಲ್ಲೆಗಳಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಬಿಸಿಲಿನ ಬೇಗೆ ತಾಳದೇ ಆಸ್ಪತ್ರೆಗಳಿಗೆ ಸೇರುವವರ ಸಂಖ್ಯೆಯೂ ಅಧಿಕವಾಗಿದೆ. ರಾಜ್ಯದ ಬಹುತೇಕ ಎಲ್ಲ ಆಸ್ಪತ್ರೆಗಳಲ್ಲಿ 5ರಿಂದ 10 ಮಂದಿ ರೋಗಿಗಳು ಬಿಸಿಲಿನಿಂದ ಬಳಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.