ಚಂಡೀಗಢ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ತೀರ್ಪಿನ ಪ್ರಕಾರ 16 ವರ್ಷದ ಮುಸ್ಲಿಂ ಹುಡುಗಿ ತನ್ನ ಸ್ವಂತ ಇಚ್ಛೆಯಂತೆ ಮದುವೆಯಾಗಲು ಸಂಪೂರ್ಣವಾಗಿ ಸ್ವತಂತ್ರಳು ಎಂದಿರುವ ನ್ಯಾಯಾಲಯ ನವದಂಪತಿಗೆ ಭದ್ರತೆ ಒದಗಿಸುವಂತೆಯೂ ಹೇಳಿದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಪ್ರೇಮ ವಿವಾಹವಾದ ದಂಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಈ ಮಹತ್ವದ ತೀರ್ಪು ನೀಡಿದೆ. ವಾಸ್ತವವಾಗಿ, ದಂಪತಿ ತಾವು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಹಾಗೆ ತಾವು ಜೂನ್ 8, 2022 ರಂದು ವಿವಾಹವಾಗಿದ್ದನ್ನು ಸಾಬೀತು ಪಡಿಸಿದ್ದರು. ಆದರೆ, ಈ ವಿವಾಹ ಪೋಷಕರಿಗೆ ಇಷ್ಟವಿರಲಿಲ್ಲ. ಪರಿಣಾಮ ಮದುವೆಯ ನಂತರ ದಂಪತಿ ರಕ್ಷಣೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲಿ ಅವರು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಮನವಿ ಸಲ್ಲಿಸಿ ಕುಟುಂಬದ ಮೇಲೆ ಆರೋಪ ಮಾಡಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಯೊಬ್ಬ ನಾಗರಿಕನಿಗೂ ಬದುಕುವ ಮತ್ತು ಸ್ವಾತಂತ್ರ್ಯದ ಹಕ್ಕಿದೆ ಎಂದು ಹೈಕೋರ್ಟ್ ಹೇಳಿದೆ. ಯಾವುದೇ ಹುಡುಗ ಅಥವಾ ಹುಡುಗಿ ಅವರು ಬಯಸಿದ ಯಾರನ್ನಾದರೂ ಮದುವೆಯಾಗಲು ಸ್ವತಂತ್ರರು. ಅವರ ನಿರ್ಧಾರದಲ್ಲಿ ಪೋಷಕರ ಹಸ್ತಕ್ಷೇಪ ಇರಬಾರದು ಎಂದು ಹೇಳಿದೆ.