ನವದೆಹಲಿ:ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಭಾರತೀಯರಲ್ಲಿ ನೂರಾರು ಮಂದಿಯನ್ನು ಭಾರತೀಯ ವಾಯುಪಡೆ ತಾಯ್ನಾಡಿಗೆ ಕರೆ ತರಲಾಗಿದೆ. ಮಂಗಳವಾರ ಸುಮಾರು 78 ಮಂದಿಯನ್ನು ಕರೆತರಲಾಗಿದ್ದು, ಅದರಲ್ಲಿ 16 ಮಂದಿಗೆ ಕೋವಿಡ್ ಇರುವುದು ಪತ್ತೆಯಾಗಿದೆ.
ಮಂಗಳವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ವಾಯುಪಡೆಯ ವಿಮಾನದ ಮೂಲಕ ದೆಹಲಿಗೆ ಕರೆತಂದ ನಂತರ ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಯಿತು. ಸೋಂಕು ಪರೀಕ್ಷೆಗೆ ಒಳಪಟ್ಟ 16 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಇರುವುದು ಪತ್ತೆಯಾಗಿದೆ.
ಕಾಬೂಲ್ನಿಂದ ಸಿಖ್ಖರ ಪವಿತ್ರ ಗ್ರಂಥವಾದ ಗುರುಗ್ರಂಥ ಸಾಹೀಬ್ ಅನ್ನು ತಂದ ಕೆಲವು ಮಂದಿಯಲ್ಲೂ ಕೋವಿಡ್ ಸೋಂಕು ದೃಢಪಟ್ಟಿದೆ. ಅಫ್ಘಾನಿಸ್ತಾನದಿಂದ ಬಂದ ಎಲ್ಲರೂ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ಗೆ ಒಳಗಾಗಬೇಕೆಂದು ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಮತ್ತು ಭಾರತೀಯ ಜನತಾ ಪಕ್ಷದ ನಾಯಕ ಆರ್ ಪಿ ಸಿಂಗ್ ಮಂಗಳವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಬೂಲ್ನಿಂದ ತಂದಿದ್ದ ಗುರು ಗ್ರಂಥ ಸಾಹಿಬ್ ಅನ್ನು ಸ್ವೀಕರಿಸಿದ್ದರು. ಇದಾದ ಸ್ವಲ್ಪ ಸಮಯದ ನಂತರ ಟ್ವೀಟ್ ಮಾಡಿದ್ದರು.
ಸದ್ಯಕ್ಕೆ ಆಫ್ಘನ್ನಿಂದ ಭಾರತೀಯರನ್ನು ಕರೆತರುವ ಕಾರ್ಯಾಚರಣೆ ಮುಂದುವರೆದಿದೆ. ಯಾವುದೇ ರಾಷ್ಟ್ರದಿಂದ ಭಾರತಕ್ಕೆ ಬರಬೇಕಾದರೆ ಕೋವಿಡ್ ಟೆಸ್ಟ್ ಕಡ್ಡಾಯ ಎಂಬ ನಿಯಮವಿದೆ. ಆದರೆ ಅಫ್ಘಾನಿಸ್ತಾನದಲ್ಲಿ ತೀವ್ರ ರಾಜಕೀಯ ಬಿಕ್ಕಟ್ಟು ಉಂಟಾಗಿರುವ ಕಾರಣದಿಂದ ಅಲ್ಲಿಂದ ಭಾರತಕ್ಕೆ ಆಗಮಿಸುವವರಿಗೆ ಕೋವಿಡ್ ಟೆಸ್ಟ್ನಿಂದ ವಿನಾಯಿತಿ ನೀಡಲಾಗಿದೆ.
ಇದನ್ನೂ ಓದಿ:ದೇಶದಲ್ಲಿ ಹೊಸದಾಗಿ 37,593 ಮಂದಿಗೆ ಕೋವಿಡ್ ದೃಢ: 648 ಜನ ಸಾವು