ಕರ್ನಾಟಕ

karnataka

ETV Bharat / bharat

ದೇವಸ್ಥಾನಕ್ಕೆ ಹೋಗಲು ದಾರಿ: 1,500 ಅಡಿ ಎತ್ತರದ ಪರ್ವತಕ್ಕೆ 400 ಮೆಟ್ಟಿಲು ನಿರ್ಮಿಸಿದ ವ್ಯಕ್ತಿ! - ಮೆಟ್ಟಿಲುಗಳ ನಿರ್ಮಾಣ

ಕಲ್ಲುಗಳಿಂದ ಕೂಡಿರುವ ಬೆಟ್ಟದಲ್ಲಿನ ದೇವಸ್ಥಾನಕ್ಕೆ ಹೋಗಲು ಸರಿಯಾದ ದಾರಿ ಇರದೇ ಇರುವುದನ್ನು ಮನಗಂಡ ಬಿಹಾರದ ವ್ಯಕ್ತಿಯೊಬ್ಬರು 1,500 ಅಡಿ ಎತ್ತರದ ಪರ್ವತದ ತುದಿಯವರೆಗೆ ಸುಮಾರು 400 ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ.

1500-feet-high-ladder-made-by-cutting-mountain-in-jehanabad
ದೇವಸ್ಥಾನಕ್ಕೆ ಹೋಗಲು ದಾರಿ: 1,500 ಅಡಿ ಎತ್ತರದ ಪರ್ವತಕ್ಕೆ 400 ಮೆಟ್ಟಿಲು ನಿರ್ಮಿಸಿದ ಸಾಮಾನ್ಯ ವ್ಯಕ್ತಿ!

By

Published : Dec 1, 2022, 5:45 PM IST

ಜೆಹಾನಾಬಾದ್ (ಬಿಹಾರ): ಬೆಟ್ಟವನ್ನು ಕಡಿದು ತನ್ನ ಹೆಂಡತಿಗೆ ರಸ್ತೆ ನಿರ್ಮಿಸಿ ಪರ್ವತ ವ್ಯಕ್ತಿ ಎಂದೇ ಖ್ಯಾತಿಯಾದ ಬಿಹಾರದ ದಶರಥ ಮಾಂಝಿ ಬಗ್ಗೆ ಇಡೀ ದೇಶಕ್ಕೆ ಗೊತ್ತಿದೆ. ಇದೀಗ ಮತ್ತೊಬ್ಬ ವ್ಯಕ್ತಿ ಬೆಟ್ಟದ ತುದಿಯಲ್ಲಿರುವ ದೇವಸ್ಥಾನಕ್ಕಾಗಿ 400 ಮೆಟ್ಟಿಲು ನಿರ್ಮಿಸಿ ಗಮನ ಸೆಳೆದಿದ್ದಾರೆ.

ಹೌದು, ಇದೇ ಬಿಹಾರದ ಜೆಹಾನಾಬಾದ್ ಜಿಲ್ಲೆಯ 50 ವರ್ಷದ ಗನೌರಿ ಪಾಸ್ವಾನ್ ತಮ್ಮ ಪತ್ನಿಯೊಂದಿಗೆ 1,500 ಅಡಿ ಎತ್ತರದ ಪರ್ವತದ ತುದಿಯವರೆಗೆ ಸುತ್ತಿಗೆ ಮತ್ತು ಉಳಿಯಿಂದ ಬಂಡೆ ಕತ್ತರಿಸುವ ಮೂಲಕ ದೇಗುಲಕ್ಕೆ ನಂಬಿಕೆಯ ಏಣಿ ನಿರ್ಮಿಸಿದ್ದಾರೆ. ಎಂಟು ವರ್ಷಗಳ ಪರಿಶ್ರಮದಿಂದ ಸುಮಾರು 400 ಮೆಟ್ಟಿಲುಗಳನ್ನು ಗನೌರಿ ಪಾಸ್ವಾನ್​ ನಿರ್ಮಿಸಿ ಸಾಧನೆ ಮಾಡಿದ್ದಾರೆ.

ದೇವಸ್ಥಾನಕ್ಕೆ ಹೋಗಲು ದಾರಿ: 1,500 ಅಡಿ ಎತ್ತರದ ಪರ್ವತಕ್ಕೆ 400 ಮೆಟ್ಟಿಲು ನಿರ್ಮಿಸಿದ ಸಾಮಾನ್ಯ ವ್ಯಕ್ತಿ!

ಬೆಟ್ಟದ ಮೇಲಿದೆ ಯೋಗೇಶ್ವರ ನಾಥ ದೇವಾಲಯ: ಹುಲಸ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಜಾರು ಬನ್ವಾರಿಯಾ ಗ್ರಾಮದ ಬಳಿ ಎತ್ತರದ ಬೆಟ್ಟದ ಬಾಬಾ ಯೋಗೇಶ್ವರ ನಾಥ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ಭಜನೆ, ಕೀರ್ತನೆಗಾಗಿ ಗನೌರಿ ಪಾಸ್ವಾನ್ ತೆರಳಿದ್ದರು. ಆದರೆ, ಕಲ್ಲುಗಳಿಂದ ಕೂಡಿರುವ ಬೆಟ್ಟದಲ್ಲಿ ದೇವಸ್ಥಾನಕ್ಕೆ ಹೋಗಲು ಸರಿಯಾದ ದಾರಿ ಇರಲಿಲ್ಲ.

ಅನೇಕ ಗಂಟೆಗಳ ಪ್ರಯಾಸ ನಂತರ ದೇಗುಲಕ್ಕೆ ತಲುಪಬೇಕಿತ್ತು. ಅಲ್ಲದೇ, ಪ್ರತಿ ಬಾರಿ ಮುಳ್ಳುಗಳು ಮತ್ತು ಚೂಪಾದ ಕಲ್ಲುಗಳಿಂದ ಗಾಯಗೊಳ್ಳಬೇಕಾಗಿತ್ತು. ಅದರಲ್ಲೂ ಮಹಿಳೆಯರು ದೇವಸ್ಥಾನ ತಲುಪುವುದು ಇನ್ನೂ ಕಷ್ಟಕರವಾಗಿತ್ತು. ಇದನ್ನು ನೋಡಿದ ಗನೌರಿ ಪಾಸ್ವಾನ್ ಬಾಬಾ ಯೋಗೇಶ್ವರ ನಾಥ ದೇವಸ್ಥಾನಕ್ಕೆ ಸುಗಮ ದಾರಿ ನಿರ್ಮಿಸಲು ನಿರ್ಧರಿಸಿದ್ದರು.

ಎರಡು ಕಡೆಯಿಂದಲೂ ದಾರಿ ನಿರ್ಮಾಣ: ಗನೌರಿ ಪಾಸ್ವಾನ್ ಈ ಹಿಂದೆ ಟ್ರಕ್ ಚಾಲಕರಾಗಿದ್ದರು. ಈ ವೃತ್ತಿ ಬಿಟ್ಟು ನಂತರ ಮೇಸ್ತ್ರಿ ಕೆಲಸ ಶುರು ಮಾಡಿದ್ದರು. ಬಿಡುವಿನ ಸಮಯದಲ್ಲಿ ಊರಿಗೆ ಬಂದಾಗ ಜನಪದ ಸಂಗೀತ ಮತ್ತು ಹಾಡುಗಾರಿಕೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದರು.

ಅಂತೆಯೇ, ಪಕ್ಕದ ಜರು ಗ್ರಾಮದ ಗಾಯನ ತಂಡದ ಜೊತೆಗೆ ಬನ್ವಾರಿಯಾ ಗ್ರಾಮದ ಗನೌರಿ ಪಾಸ್ವಾನ್ ಬೆಟ್ಟದ ಮೇಲಿರುವ ಬಾಬಾ ಯೋಗೇಶ್ವರನಾಥ ದೇವಸ್ಥಾನಕ್ಕೆ ಭಜನೆ ಕೀರ್ತನೆಗಾಗಿ ಹೋಗುತ್ತಿದ್ದರು. ದೇವಸ್ಥಾನಕ್ಕೆ ಹೋಗಲು ಕಠಿಣ ದಾರಿ ಮನಗಂಡ ಗನೌರಿ ಪಾಸ್ವಾನ್, ತನ್ನ ಮನಸ್ಸಿನಲ್ಲೇ ದೇವಸ್ಥಾನಕ್ಕೆ ದಾರಿ ನಿರ್ಮಿಸುವ ಸಂಕಲ್ಪ ಮಾಡಿದ್ದರು.

ಅಲ್ಲಿಂದಲೇ ಕಲ್ಲುಗಳನ್ನು ಕತ್ತರಿಸಿ ಮೆಟ್ಟಿಲುಗಳ ನಿರ್ಮಿಸುವ ಕಾರ್ಯ ಆರಂಭಿಸಿದ್ದಾರೆ. ಒಂದು ರಸ್ತೆಯನ್ನು ಜಾರು ಗ್ರಾಮದಿಂದ ಮತ್ತು ಇನ್ನೊಂದು ಬನ್ವಾರಿಯಾ ಗ್ರಾಮದಿಂದ ಮಾಡಲಾಗಿದೆ. ಜನರ ಸಹಕಾರ ಮತ್ತು ತಮ್ಮ ಇಡೀ ಕುಟುಂಬದ ಶ್ರಮದಿಂದ ಸುಮಾರು ಎಂಟು ವರ್ಷಗಳಲ್ಲಿ ಈ ಕೆಲಸವನ್ನು ಪೂರ್ಣಗೊಳಿಸುವ ಅಂತಿಮ ಪ್ರಯತ್ನದಲ್ಲಿದ್ದಾರೆ.

ಬೆಟ್ಟದ ಮೇಲಿರುವ ಯೋಗೇಶ್ವರ ನಾಥ ದೇವಾಲಯಕ್ಕೆ 2014ರಿಂದ ಮೆಟ್ಟಿಲು ನಿರ್ಮಿಸುವ ಕೆಲಸದಲ್ಲಿ ತೊಡಗಿದ್ದೇನೆ. ಇದುವರೆಗೆ ಅಂದಾಜು 400 ಮೆಟ್ಟಿಲು ನಿರ್ಮಿಸಲಾಗಿದೆ. ಎಂಟು - ಹತ್ತು ಮೆಟ್ಟಿಲುಗಳ ನಿರ್ಮಾಣ ಬಾಕಿ ಉಳಿದಿದೆ. ಶೀಘ್ರದಲ್ಲೇ ಅವುಗಳು ಸಹ ಪೂರ್ಣಗೊಳಿಸುತ್ತೇನೆ. ಇದಕ್ಕೆ ನನ್ನ ಪತ್ನಿ, ಮಕ್ಕಳೂ ಸಹಕರಿಸುತ್ತಾರೆ. ಬಾಬಾ ದೇವಸ್ಥಾನಕ್ಕೆ ದಾರಿ ಮಾಡಿಕೊಡುವುದೊಂದೇ ನನ್ನ ಗುರಿ ಎನ್ನುತ್ತಾರೆ ಗನೌರಿ ಪಾಸ್ವಾನ್.

ವಿಗ್ರಹಗಳಿಗೂ ಗನೌರಿ ಹುಡುಕಾಟ: ಗನೌರಿ ಪಾಸ್ವಾನ್ ಅವರಿಗೆ ಮತ್ತೊಂದು ಹಾವ್ಯಸ ಇದೆ. ಬೆಟ್ಟದ ತಪ್ಪಲಿಗೆ ಹೋಗಿ ಹಳೆಯ ವಿಗ್ರಹಗಳ ಹುಡುಕಾಟ ನಡೆಸುತ್ತಿದ್ದಾರೆ. ಶೋಧ ಕಾರ್ಯದಲ್ಲಿ ಪತ್ತೆಯಾದ ಆ ವಿಗ್ರಹಗಳನ್ನು ಯೋಗೇಶ್ವರನಾಥ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಸ್ಥಾಪಿಸಲಾಗುತ್ತದೆ. ಈಗಾಗಲೇ ಬುದ್ಧನ ಆರು ಅಡಿ ಬೃಹತ್ ಕಪ್ಪು ಕಲ್ಲಿನ ಪ್ರತಿಮೆಯೂ ಪತ್ತೆಯಾಗಿದೆ ಎಂದು ಗನೌರಿ ಪಾಸ್ವಾನ್ ತಿಳಿಸಿದ್ದಾರೆ.

ಇದನ್ನೂ ಓದಿ:ಅಧಿಕಾರಿಗಳಿಂದ ಸಿಗದ ಸ್ಪಂದನೆ: ಶಿವಮೊಗ್ಗದಲ್ಲಿ ಗ್ರಾಮಸ್ಥರಿಂದಲೇ ರಸ್ತೆ ದುರಸ್ಥಿ

ABOUT THE AUTHOR

...view details