ನವದೆಹಲಿ:ನವೆಂಬರ್ 26, 2008. ಈ ದಿನವನ್ನು ಭಾರತದ ಇತಿಹಾಸ ಎಂದಿಗೂ ಮರೆಯದು. ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಸಂಘಟನೆಯ 10 ಉಗ್ರರು ಏಕಾಏಕಿ ಮುಂಬೈನಲ್ಲಿ ವಿಧ್ವಂಸಕ ಕೃತ್ಯ ಎಸಗಿ 174 ಜನರನ್ನು ಮನಸೋಇಚ್ಛೆ ಹತ್ಯೆ ಮಾಡಿದ್ದರು. 26/11 ಎಂದೇ ಗುರುತಿಸಲ್ಪಡುವ ಈ ದಾಳಿಯು ದೇಶವಲ್ಲದೇ, ವಿಶ್ವಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘೋರ ದುಷ್ಕೃತ್ಯಕ್ಕೆ ಇಂದಿಗೆ 15 ವರ್ಷ ತುಂಬುತ್ತಿದೆ.
15 ವರ್ಷಗಳ ಹಿಂದೆ ನವೆಂಬರ್ 26ರಂದು ಪಾಕಿಸ್ತಾನದಿಂದ ಬಂದ ಕೀಚಕರು ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್, ತಾಜ್, ಒಬೆರಾಯ್ ಹೋಟೆಲ್ಗಳು, ನಾರಿಮನ್ ಹೌಸ್ನಲ್ಲಿರುವ ಯಹೂದಿ ಕೇಂದ್ರ ಹಾಗೂ ಪಿಯೋಫೋಲ್ಡ್ ಕೆಫೆಗಳ ಮೇಲೆ ದಾಳಿ ನಡೆಸಿದ್ದರು. ಇವು ಯುರೋಪಿಯನ್ನರು, ಭಾರತೀಯರು ಮತ್ತು ಯಹೂದಿಗಳು ಹೆಚ್ಚಿನ ಭೇಟಿ ನೀಡುತ್ತಿದ್ದ ಸ್ಥಳಗಳಾಗಿದ್ದರಿಂದ ಜನಸಂದಣಿ ಇರುವುದರ ಬಗ್ಗೆ ಅರಿತುಕೊಂಡು ದಾಳಿ ನಡೆಸಲಾಗಿತ್ತು. ನಾಲ್ಕು ದಿನಗಳ ಅವಧಿಯಲ್ಲಿ ನಡೆದ ವಿಧ್ವಂಸಕ ಕೃತ್ಯದಲ್ಲಿ 174 ಮಂದಿ ಪ್ರಾಣ ಕಳೆದುಕೊಂಡಿದ್ದರು. 300ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.
ಸೆರೆಸಿಕ್ಕಿದ್ದ ಏಕೈಕ ಉಗ್ರ ಕಸಬ್:ದಾಳಿ ಮಾಡಿದ 10 ಉಗ್ರರ ಪೈಕಿ 9 ಮಂದಿಯನ್ನು ಪೊಲೀಸರು, ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿ ಬಲಿ ಪಡೆದಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್ ರೈಲ್ವೇ ನಿಲ್ದಾಣದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಏಕೈಕ ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಕಸಬ್ನನ್ನು ಮಾತ್ರ ಜೀವಂತವಾಗಿ ಬಂಧಿಸಲಾಗಿತ್ತು. ಈ ರಕ್ತಪಿಪಾಸುವಿಗೆ 2010ರ ಮೇ ತಿಂಗಳಲ್ಲಿ ಮರಣದಂಡನೆ ವಿಧಿಸಲಾಯಿತು. ಅಂದರೆ ದಾಳಿ ನಡೆದ ಎರಡು ವರ್ಷಗಳ ನಂತರ ಪುಣೆಯ ಜೈಲಿನಲ್ಲಿ ಆತನನ್ನು ನೇತು ಹಾಕಲಾಯಿತು.
ತಾಜ್ ಹೋಟೆಲ್ನಲ್ಲಿ ಉಗ್ರರು ನೂರಾರು ಪ್ರವಾಸಿಗರನ್ನು ಹುಡುಕಿ ಹುಡುಕಿ ಗುಂಡಿಕ್ಕಿ ಕೊಂದಿದ್ದರು. ಅಂದಿನ ಕಾರ್ಯಾಚರಣೆಯ ಕುರಿತು ಸಿನಿಮಾವೊಂದು ತೆರೆಕಂಡಿದೆ. ವಿಧ್ವಂಸಕ ಕೃತ್ಯವು ಭಾರತದ ಇತಿಹಾಸದಲ್ಲಿ ಎಂದೂ ಮರೆಯದ ಗಾಯವಾಗಿ ಪರಿಣಮಿಸಿದೆ. ಇನ್ನೊಂದೆಡೆ ಭಾರತದ ಭದ್ರತಾ ವ್ಯವಸ್ಥೆಯನ್ನೇ ಈ ದಾಳಿ ಅಣಕಿಸಿತ್ತು. ವಿಶೇಷವೆಂದರೆ, ಭಯೋತ್ಪಾದನಾ ದಾಳಿಗೆ 15 ವರ್ಷ ತುಂಬುವ ಮುನ್ನವೇ ಇಸ್ರೇಲ್ ಸರ್ಕಾರ ಲಷ್ಕರ್ ಎ ತೊಯ್ಬಾವನ್ನು (ಎಲ್‌ಇಟಿ) 'ಭಯೋತ್ಪಾದಕ ಸಂಘಟನೆ' ಅಧಿಕೃತವಾಗಿ ಎಂದು ಘೋಷಿಸಿದೆ.
ಇಸ್ರೇಲ್ನಲ್ಲಿ ಎಲ್‌ಇಟಿ ನಿಷೇಧ:ಎಲ್‌ಇಟಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಇಸ್ರೇಲ್ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಇದಕ್ಕಾಗಿ ಭಾರತ ಸರ್ಕಾರ ಯಾವುದೇ ಮನವಿ ಮಾಡಿರಲಿಲ್ಲ. ಆ ದೇಶದಲ್ಲಿ ಹಮಾಸ್ ಉಗ್ರರ ದಾಳಿಯ ಬೆನ್ನಲ್ಲೇ, ಭಾರತವನ್ನು ಕಾಡುತ್ತಿರುವ ಉಗ್ರ ಸಂಘಟನೆಗೆ ನಿರ್ಬಂಧ ಹೇರಿದೆ.
26/11 ಮುಂಬೈ ಭಯೋತ್ಪಾದಕ ದಾಳಿಯ ಕಹಿ ನೆನಪಿಗೆ ಶುಕ್ರವಾರ (ನವೆಂಬರ್ 24) ಜಿನೀವಾದಲ್ಲಿನ ವಿಶ್ವಸಂಸ್ಥೆಯ ಕಚೇರಿಯ ಮುಂಭಾಗದ ಬ್ರೋಕನ್ ಚೇರ್‌ನಲ್ಲಿ ಪೋಸ್ಟರ್ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಮಾನವ ಹಕ್ಕುಗಳ ಕಾರ್ಯಕರ್ತ ಮತ್ತು ಲೇಖಕ ಪ್ರಿಯಾಜಿತ್ ದೇಬ್ಸರ್ಕರ್ ಈ ಪೋಸ್ಟರ್ನ ರೂವಾರಿಯಾಗಿದ್ದಾರೆ. ಅಂದಿನ ದಾಳಿಯ ವಿರುದ್ಧ ವಿಶ್ವಸಂಸ್ಥೆಯ ಮುಂದೆ ಪ್ರತಿಭಟನಾತ್ಮಕ ಪೋಸ್ಟರ್ ಅಂಟಿಸಲಾಗಿದೆ. 15 ವರ್ಷಗಳ ಹಿಂದೆ ಭಾರತದ ಆರ್ಥಿಕ ಕೇಂದ್ರವಾದ ಮುಂಬೈಯನ್ನು ನಡುಗಿಸಿದ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಜನರು ಮತ್ತು ಯೋಧರ ತ್ಯಾಗವನ್ನು ಸ್ಮರಿಸಲಾಗುವುದು ಎಂದರು.
ಇದನ್ನೂ ಓದಿ:ಮುಂಬೈ ಭಯೋತ್ಪಾದಕ ದಾಳಿಗೆ 15 ವರ್ಷ: ಹುತಾತ್ಮ ಪೊಲೀಸ್ ಅಧಿಕಾರಿಗಳು, ಯೋಧರಿಗೆ ಗೌರವ ನಮನ