ದುರ್ಗ್ (ಛತ್ತೀಸ್‌ಗಢ): ಕೇಂದ್ರ ಕಚೇರಿಯಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಪುರಾಯಿ ಗ್ರಾಮ ಇಂದು ರಾಷ್ಟ್ರದಲ್ಲಿ ಗಮನ ಸೆಳೆಯುತ್ತಿದೆ. ಇದಕ್ಕೆ ಕಾರಣ ಗ್ರಾಮದ 15 ವರ್ಷದ ಬಾಲಕಿ ಚಂದ್ರಕಲಾ ಓಜಾ. ಹೌದು, ದೃಢಸಂಕಲ್ಪದಿಂದ ಮಾಡಿದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ಈಕೆ ಸಾಬೀತುಪಡಿಸಿದ್ದಾಳೆ. 8 ಗಂಟೆಗಳ ಕಾಲ ನಿರಂತರವಾಗಿ ಈಜುವ ಮೂಲಕ ಈಕೆ ವಿಶ್ವದಾಖಲೆ ಮಾಡಿದ್ದಾಳೆ. ಭಾನುವಾರ ಬೆಳಗ್ಗೆ 5 ಗಂಟೆಗೆ ಕೆರೆಯಲ್ಲಿ ಈಜಲು ಆರಂಭಿಸಿದ ಈಕೆ ಮಧ್ಯಾಹ್ನ 1 ಗಂಟೆಯವರೆಗೂ ಈಜುತ್ತಿದ್ದಳು. ಈ ವೇಳೆ ಗ್ರಾಮದ ಜನತೆ ಈ ದಾಖಲೆಯನ್ನು ಕಣ್ತುಂಬಿಕೊಂಡಿದ್ದು, ಮಾತ್ರವಲ್ಲದೇ ಆಕೆ ಹುರಿದುಂಬಿಸುತ್ತಿದ್ದರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನ ಮೂವರು ಸದಸ್ಯರ ತಂಡವೂ ಸ್ಥಳದಲ್ಲಿದ್ದರು.
ವೈದ್ಯಕೀಯ ತಪಾಸಣೆ:ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ತಂಡವು ಚಂದ್ರಕಲಾ ಅವರ ಈಜುವಿಕೆಯ ಸಂಪೂರ್ಣ ವಿಡಿಯೋ ರೆಕಾರ್ಡಿಂಗ್ ಮಾಡಿದೆ. ರಾಜ್ಯ ಗೃಹ ಸಚಿವ ತಾಮ್ರಧ್ವಜ್ ಸಾಹು ಕೂಡ ಸ್ಥಳಕ್ಕೆ ಆಗಮಿಸಿ ಚಂದ್ರಕಲಾ ಅವರನ್ನು ಅಭಿನಂದಿಸಿದರು. ದಾಖಲೆ ಬರೆದ ಚಂದ್ರಕಲಾ ಕೆರೆಯಿಂದ ಹೊರ ಬಂದ ಕೂಡಲೇ ಜನ ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಬಳಿಕ ವೈದ್ಯರ ತಂಡ ವೈದ್ಯಕೀಯ ತಪಾಸಣೆ ನಡೆಸಿತು.
8 ಗಂಟೆ ಕಾಲ 64 ಸುತ್ತು ಈಜು:ಕೆರೆಯಲ್ಲಿಚಂದ್ರಕಲಾಸುಮಾರು 8 ಗಂಟೆಯಲ್ಲಿ 64 ಸುತ್ತು ಈಜಿದ್ದಾರೆ. ದಾಖಲೆ ನಿರ್ಮಿಸಿದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಚಂದ್ರಕಲಾ "ಈಜಿನಲ್ಲಿ ವಿಶ್ವ ದಾಖಲೆ ನಿರ್ಮಿಸಿರುವುದು ಸಂತಸ ತಂದಿದೆ. ನನ್ನ ಈ ಪ್ರಯತ್ನಕ್ಕೆ ಪೋಷಕರು, ಗ್ರಾಮದ ಜನರು ಹಾಗೂ ಗೃಹ ಸಚಿವರು ಸಂಪೂರ್ಣ ಬೆಂಬಲ ನೀಡಿ ಆಶೀರ್ವಾದ ಮಾಡಿದ್ದಾರೆ" ಎಂದು ಹರ್ಷ ವ್ಯಕ್ತಪಡಿಸಿದರು.