ಮುಂಬೈ (ಮಹಾರಾಷ್ಟ್ರ):ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಶಾಲೆಯೊಂದರಲ್ಲಿ ಅಭ್ಯಾಸದ ವೇಳೆ ಮತ್ತೊಬ್ಬ ವಿದ್ಯಾರ್ಥಿ ಎಸೆದ ಜಾವೆಲಿನ್ ತಲೆಗೆ ಚುಚ್ಚಿದ ಪರಿಣಾಮ 15 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಬಾಲಕ ಹುಜೆಫಾ ದವರೆ ಎಂಬ ಬಾಲಕ ತನ್ನ ಶೂಲೇಸ್ ಕಟ್ಟಲು ಕೆಳಗೆ ಬಾಗಿದಾಗ ಮೊನಚಾದ ವಸ್ತುವು (ಜಾವೆಲಿನ್) ತನ್ನ ಕಡೆಗೆ ಬರುತ್ತಿರುವುದನ್ನು ಗಮನಿಸಿರಲಿಲ್ಲ. ಜಿಲ್ಲೆಯ ಮಂಗಾವ್ ತಾಲೂಕಿನ ಗೋರೆಗಾಂವ್‌ನ ಪುರಾರ್‌ನಲ್ಲಿರುವ ಐಎನ್‌ಟಿ ಇಂಗ್ಲಿಷ್ ಶಾಲೆಯಲ್ಲಿ ಬುಧವಾರ ಮಧ್ಯಾಹ್ನ ವಿದ್ಯಾರ್ಥಿಗಳು ಶಾಲೆಯ ಮೈದಾನದಲ್ಲಿ ಜಾವೆಲಿನ್ ಎಸೆತದ ಅಭ್ಯಾಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಾವೆಲಿನ್ ತಲೆಗೆ ಚುಚ್ಚಿದ ನಂತರ ಬಾಲಕ ಸ್ಥಳದಲ್ಲೇ ಸಾವು:ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದ ಜಾವಲಿನ್ ತಂಡದಲ್ಲಿ ಬಾಲಕ ದವರೆ ಕೂಡ ಇದ್ದ. ಅಭ್ಯಾಸದ ಅವಧಿ ನಡೆಯುತ್ತಿರುವಾಗ, ಸಹ ವಿದ್ಯಾರ್ಥಿಯೊಬ್ಬ ಜಾವಲಿನ್ ಎಸೆದಿದ್ದಾನೆ. ಈ ವೇಳೆ ಮೊನಚಾದ ತುದಿಯನ್ನು ಹೊಂದಿರುವ ಉದ್ದನೆಯ ಕೋಲು (ಜಾವಲಿನ್) ತನ್ನ ದಿಕ್ಕಿನಲ್ಲಿ ಹಾರಿ ಬರುತ್ತಿರುವುದನ್ನು ಬಾಲಕ ಗಮನಿಸಿರಲಿಲ್ಲ. ಆಗ ಆತ ತನ್ನ ಶೂಲೇಸ್ ಕಟ್ಟಿಕೊಳ್ಳಲು ಕೆಳಗೆ ಬಾಗಿದ್ದಾಗ ತಲೆಗೆ ಪೆಟ್ಟು ಬಿದ್ದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಜಾವಲಿನ್ ತಲೆಗೆ ಚುಚ್ಚಿದ ನಂತರ ಬಾಲಕ ದವರೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮುನ್ನವೇ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.