ಮುಂಬೈ: ರಾಜ್ಯದಲ್ಲಿ ಏಕನಾಥ್ ಶಿಂಧೆ ಹಾಗೂ ಫಡಣವೀಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಸರ್ಕಾರವು ನಿಶ್ಚಿತವಾಗಿಯೂ ತನ್ನ ಸಂಪೂರ್ಣ ಅವಧಿಯನ್ನು ಪೂರ್ಣಗೊಳಿಸಲಿದೆ ಎಂದು ವಿಧಾನಸಭೆಯ ನೂತನ ಅಧ್ಯಕ್ಷ ರಾಹುಲ್ ನಾರ್ವೇಕರ್ ವಿಶ್ವಾಸ ವ್ಯಕ್ತಪಡಿಸಿದರು. ಈಟಿವಿ ಭಾರತ್ನೊಂದಿಗೆ ಅವರು ಮಾತನಾಡಿ ಈ ಸುಳಿವು ನೀಡಿದ್ದಾರೆ.
ಶಾಸಕರ ಅನರ್ಹತೆ ಕುರಿತಂತೆ ಶಿವಸೇನಾ ಶಿಂಧೆ ಬಣ ಹಾಗೂ ಶಿವಸೇನಾ ಠಾಕ್ರೆ ಬಣ ಎರಡೂ ಕಡೆಯಿಂದ ಪರಸ್ಪರರ ವಿರುದ್ಧ 20 ಅರ್ಜಿಗಳು ಬಂದಿವೆ. ಈ ವಿಷಯದಲ್ಲಿ ತ್ವರಿತವಾಗಿ ನಿರ್ಣಯ ಕೈಗೊಳ್ಳುವುದು ಅಗತ್ಯವೆನಿಸುತ್ತದೆ ಎಂದು ನಾರ್ವೇಕರ್ ಹೇಳಿದರು.
ಬಂಡಾಯ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿ ಶಿವಸೇನೆಯು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಜುಲೈ 11 ರಂದು ಅರ್ಜಿಯ ವಿಚಾರಣೆ ನಡೆಯಲಿದೆ. ಆದರೆ, ಈಗ ವಿಧಾನಸಭಾಧ್ಯಕ್ಷರನ್ನು ಆಯ್ಕೆ ಮಾಡಲಾಗಿರುವುದರಿಂದ, ಶಾಸಕರ ಅನರ್ಹತೆಯ ಬಗ್ಗೆ ಸ್ಪೀಕರ್ ನಿರ್ಧರಿಸಬಹುದು. ಕೋರ್ಟ್ ಕೂಡ ಸ್ಪೀಕರ್ ಅವರೇ ನಿರ್ಧಾರ ಮಾಡಲಿ ಎಂದು ಹೇಳಬಹುದು. ಹೀಗಾಗಿ 15 ಶಿವಸೇನಾ ಶಾಸಕರ ಅನರ್ಹತೆಯ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದು ರಾಹುಲ್ ನಾರ್ವೇಕರ್ ಹೇಳಿದರು.
ನಾರ್ವೇಕರ್ ಪರೋಕ್ಷ ಸುಳಿವು:ಈ ಮೂಲಕ ಶಿವಸೇನೆಯ 15 ಶಾಸಕರನ್ನು ಅನರ್ಹಗೊಳಿಸುವ ತಮ್ಮ ಇಂಗಿತದ ಬಗ್ಗೆ ನಾರ್ವೇಕರ್ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ವಿಧಾನಸಭೆಯಲ್ಲಿ ರಾಜ್ಯದ ವಿವಿಧ ಪಕ್ಷಗಳ ಹಲವಾರು ಹಿರಿಯ ಶಾಸಕರು ಪಾಲ್ಗೊಳ್ಳಲಿದ್ದು, ಇದರಿಂದ ನಿಮ್ಮ ಮೇಲೆ ಒತ್ತಡವೇನಾದರೂ ಉಂಟಾಗಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ನಾರ್ವೇಕರ್, ನನ್ನ ಮೇಲೆ ಯಾವುದೇ ಒತ್ತಡ ಬರುವ ಸಾಧ್ಯತೆಯೇ ಇಲ್ಲ. ನನ್ನ ಅಧಿಕಾರದ ವ್ಯಾಪ್ತಿಯಲ್ಲಿ ನನ್ನ ಕೆಲಸ ಸಾಗಲಿದೆ. ಎಲ್ಲರಿಗೂ ಸಮಾನವಾದ ನ್ಯಾಯ ಒದಗಿಸಲು ಪ್ರಯತ್ನಿಸಲಿದ್ದೇನೆ. ಹೀಗಾಗಿ ಯಾರು ಎಷ್ಟೇ ದೊಡ್ಡವರಾದರೂ ಅವರಿಂದ ನನಗೆ ಒತ್ತಡ ಉಂಟಾಗುವ ಪ್ರಶ್ನೆ ಇಲ್ಲ ಎಂದರು.
ರಾಜ್ಯಪಾಲರಿಗೆ ಸಂವಿಧಾನದತ್ತ ಅಧಿಕಾರಗಳಿವೆ:ವಿಧಾನಸಭಾಧ್ಯಕ್ಷರ ಚುನಾವಣೆಯ ಬಗ್ಗೆ ಮಾತನಾಡಿದ ನಾರ್ವೇಕರ್, ರಾಜ್ಯಪಾಲರಿಗೆ ಸಂವಿಧಾನದತ್ತ ಅಧಿಕಾರಗಳಿವೆ. ಯಾವಾಗ ಯಾವ ಚುನಾವಣೆಗಳನ್ನು ನಡೆಸಬೇಕೆಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಹಿಂದಿನ ಸಮಯದಲ್ಲಿ ಮಹಾವಿಕಾಸ ಅಘಾಡಿ ಸರ್ಕಾರದಲ್ಲಿ ಒಗ್ಗಟ್ಟಿರಲಿಲ್ಲ.
ಹೀಗಾಗಿ ವಿಧಾಸಸಭಾಕ್ಷರ ಚುನಾವಣೆಯ ದಿನಾಂಕವನ್ನು ಅವರು ನಿರ್ಧರಿಸಿರಲಿಲ್ಲ ಅನಿಸುತ್ತದೆ. ಆದರೆ ಈಗ ಹೊಸ ಸರ್ಕಾರ ಬಂದಿದ್ದರಿಂದ ಅಧ್ಯಕ್ಷರ ಚುನಾವಣೆಯನ್ನು ನಡೆಸುವ ನಿರ್ಧಾರ ಕೈಗೊಂಡಿರಬಹುದು ಎಂದು ಹೇಳಿದರು.
ಇದನ್ನು ಓದಿ:ದೇಶಕ್ಕೆ ಕೇವಲ ಪದವಿ ಪಡೆದ ವಿದ್ಯಾರ್ಥಿಗಳು ಬೇಕಿಲ್ಲ; ಕೌಶಲ್ಯ & ಆತ್ಮವಿಶ್ವಾಸ ಅಗತ್ಯ': ಪ್ರಧಾನಿ ಮೋದಿ