ನವದೆಹಲಿ:ಕೊರೊನಾ ಎರಡನೇ ಅಲೆ ಅತೀ ವೇಗವಾಗಿ ಹಬ್ಬುತ್ತಿದೆ. ಈಗ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಗೂ ಮಹಾಮಾರಿ ಕೊರೊನಾ ವಕ್ಕರಿಸಿದ್ದು, ಕೋವಿಡ್ ಭೀತಿ ಮತ್ತಷ್ಟು ಹೆಚ್ಚಾಗ್ತಿದೆ.
ಸುಮಾರು 15 ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಜಡ್ಜ್ವೋರ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಷ್ಟೇ ಅಲ್ಲ, ಅಲ್ಲಿ ಗಣನೀಯವಾಗಿ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲಿನ ಅನೇಕ ಸಿಬ್ಬಂದಿಗೂ ಕೊರೊನಾ ಸೋಂಕು ಹರಡಿದೆ.
ನ್ಯಾಯಮೂರ್ತಿ ಎಂ.ಆರ್. ಶಾ, ನ್ಯಾ. ಇಂದಿರಾ ಬ್ಯಾನರ್ಜಿ ಮತ್ತು ನ್ಯಾ. ಸೂರ್ಯ ಕಾಂತ್ ಮತ್ತು ಅವರ ಸಿಬ್ಬಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ತಿಳಿದುಬಂದಿದೆ.
ಕೊರೊನಾ ಪ್ರಕರಣಗಳು ಹೆಚ್ಚಳದಿಂದಾಗಿ ತುರ್ತು ಪ್ರಕರಣಗಳನ್ನು ಮಾತ್ರ ತೆಗೆದುಕೊಳ್ಳುವುದು ಮತ್ತು ಕೆಲವು ಬೆಂಚುಗಳನ್ನು ಸಹ ರದ್ದುಪಡಿಸಲಾಗಿದೆ ಎಂದು ಈ ಹಿಂದೆ ನ್ಯಾಯಾಲಯ ಸುತ್ತೋಲೆ ಹೊರಡಿಸಿತ್ತು. ಅದರಂತೆ 11 ನ್ಯಾಯಮೂರ್ತಿಗಳನ್ನು ಒಳಗೊಂಡ 4 ಬೆಂಚುಗಳು ಮಾತ್ರ ಇಂದು ಕಾರ್ಯ ನಿರ್ವಹಿಸಿದವು.
ವಕೀಲರಿಗಾಗಿ ನ್ಯಾಯಾಲಯದ ಬಾಗಿಲು ಮತ್ತೆ ತೆರೆದಿತ್ತು. ನ್ಯಾಯಮೂರ್ತಿಗಳು ಹೈಬ್ರಿಡ್ ವಿಚಾರಣೆಗೆ ಮಾತ್ರ ಅವಕಾಶ ನೀಡಿದ್ದರು. ಆದರೆ ಈಗ ಮತ್ತೆ ವ್ಯವಸ್ಥೆ ಸ್ಥಗಿತಗೊಂಡಿದೆ. ಕಳೆದ ವರ್ಷದ ಮೊದಲ ಅಲೆಯಲ್ಲಿದ್ದ ಸ್ಥಿತಿಯೇ ಮತ್ತೆ ನ್ಯಾಯಾಲಯಕ್ಕೆ ಬಂದಿದೆ. ನ್ಯಾಯಮೂರ್ತಿಗಳು ತಮ್ಮ-ತಮ್ಮ ಮನೆಗಳಿಂದಲೇ ಪ್ರಕರಣಗಳನ್ನು ಆಲಿಸುತ್ತಿದ್ದಾರೆ. ರೋಗಲಕ್ಷಣಗಳಿರುವ ಜನರಿಗೆ ಆರ್ಟಿಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸುವಂತೆ ನ್ಯಾಯಾಲಯವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಎಲ್ಲಾ ನ್ಯಾಯಮೂರ್ತಿಗಳು ಒಂದು ತಿಂಗಳ ಹಿಂದೆಯೇ ಲಸಿಕೆ ಹಾಕಿಸಿಕೊಂಡಿದ್ದರು. ಲಸಿಕೆಗಾಗಿ ವಕೀಲರು ಮತ್ತು ಸಿಬ್ಬಂದಿ ತಮ್ಮ ಹೆಸರುಗಳನ್ನು ಸಹ ನೋಂದಾಯಿಸಿದ್ದಾರೆ.
ಇನ್ನು ಸಿಜೆಐ ಎಸ್ ಎ ಬೊಬ್ಡೆ ಏಪ್ರಿಲ್ 23 ರಂದು ನಿವೃತ್ತರಾಗಲಿದ್ದು, ಮುಂದಿನ ಸಿಜೆಐ ಎನ್ ವಿ ರಮಣ ಏಪ್ರಿಲ್ 24 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.