ಮುಂಬೈ: ಮುಂಬೈ ಫೈರ್ ಬ್ರಿಗೇಡ್ (ಅಗ್ನಿಶಾಮಕ ದಳ) ನೇಮಕಾತಿ ವೇಳೆ ನಡೆಸಲಾದ ದೈಹಿಕ ಪರೀಕ್ಷೆಯಲ್ಲಿ 147 ಅಭ್ಯರ್ಥಿಗಳು ಗಾಯಗೊಂಡಿದ್ದಾರೆ. 142 ಮಂದಿ ಸಣ್ಣಪುಟ್ಟ ಗಾಯಗಳಿಗೆ ತುತ್ತಾಗಿದ್ದು, 5 ಮಂದಿಗೆ ಮೂಳೆ ಮುರಿತವಾಗಿದೆ. ಗಾಯಾಳುಗಳನ್ನು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಆಸ್ಪತ್ರೆಗೆ ಸೇರಿಸಲಾಗಿದೆ.
ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ 18 ಅಡಿ ಎತ್ತರದಿಂದ ಹಾರುವಾಗ ಬಹುತೇಕ ಅಭ್ಯರ್ಥಿಗಳು ಗಾಯಗೊಂಡಿದ್ದಾರೆ. ಅಭ್ಯರ್ಥಿಗಳು ನೆಲದ ಬದಲು ಫ್ಲಾಟ್ ಫಾರ್ಮ್ ಮೇಲೆ ಜಿಗಿಯಬೇಕಿತ್ತು. ಈ ವೇಳೆ ಗಾಯಗೊಂಡಿದ್ದಾರೆ. ಈ ರೀತಿ ಜಿಗಿಯುವಾಗ ಅಗ್ನಿಶಾಮಕ ಸಿಬ್ಬಂದಿ ಮುನ್ನೆಚ್ಚರಿಕೆಯಾಗಿ ಜಂಪಿಂಗ್ ಶೀಟ್ಗಳನ್ನು ಹಿಡಿದಿದ್ದರು ಎಂದು ವಿವರಣೆ ನೀಡಿದ್ದಾರೆ.
ಮುಂಬೈ ಫೈರ್ ಬ್ರಿಗೇಡ್ನಲ್ಲಿ ಖಾಲಿ ಇರುವ 910 ಅಗ್ನಿಶಾಮಕ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಜನವರಿ 13ರಿಂದ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, 7,532 ಮಂದಿ ದೈಹಿಕ ಪರೀಕ್ಷೆಗೆ ಒಳಗಾಗಿದ್ದಾರೆ. ಇವರಲ್ಲಿ 147 ಅಭ್ಯರ್ಥಿಗಳು ಗಾಯಕ್ಕೆ ತುತ್ತಾಗಿದ್ದಾರೆ. ಗಾಯಗೊಂಡವರನ್ನು ತಕ್ಷಣಕ್ಕೆ ಆಂಬ್ಯುಲೆನ್ಸ್ನಲ್ಲಿ ಮುನ್ಸಿಪಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇದರಲ್ಲಿ ಐವರಿಗೆ ಮೂಳೆ ಮುರಿತವಾಗಿದೆ. ಉಳಿದೆಲ್ಲರನ್ನೂ ಚಿಕಿತ್ಸೆ ನೀಡಿದ ಬಳಿಕ ಮನೆಗೆ ಕಳುಹಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಎಲ್ಲಾ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿದೆ ಎಂದು ಬಿಎಂಸಿ ತಿಳಿಸಿದೆ. ಕಳೆದ ಮೂರು ವರ್ಷಗಳಲ್ಲಿ ಮುಂಬೈ ಬ್ರಿಗೇಡ್ನಲ್ಲಿ ಯಾವುದೇ ನೇಮಕಾತಿ ನಡೆಯದ ಹಿನ್ನೆಲೆಯಲ್ಲಿ 1,200 ಹುದ್ದೆಗಳು ಖಾಲಿ ಇದ್ದು, ಇದರಲ್ಲಿ 910 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 20 ಸಾವಿರ ಪುರುಷ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.
ಖಾಲಿ ಇರುವ ಹುದ್ದೆ ಭರ್ತಿಗೆ ಕ್ರಮ: ಈ ಹುದ್ದೆಗೆ ದೈಹಿಕ ಪರೀಕ್ಷೆಯಲ್ಲಿ ಮೂರು ನಿಮಿಷದಲ್ಲಿ 800 ಮೀ ಓಟ, 20 ಪುಲ್ ಅಪ್ಸ್, 20 ಅಡಿ ಅಗ್ಗದಿಂದ ಕೆಳಗೆ ಜಿಗಿಯುವುದು. 19 ಅಡಿ ಎತ್ತರದಿಂದ ಕೆಳಗೆ ಇಳಿಯುವ ಸಾಮರ್ಥ್ಯ ಪರೀಕ್ಷೆ ನಡೆಸಲಾಗುತ್ತದೆ. 30 ವರ್ಷದೊಳಗಿನ ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಿದ್ದು, ದಿನದಲ್ಲಿ ಸಾವಿರಾರು ಅಭ್ಯರ್ಥಿಗಳು ಈ ರೀತಿ ಜಿಗಿಯುವ ಪರೀಕ್ಷೆ ಎದುರಿಸುತ್ತಿದ್ದಾರೆ. ಹೀಗೆ ಜಿಗಿಯುವಾಗ ಕೆಳಗೆ ನುರಿತ ಸಿಬ್ಬಂದಿ ನೆಟ್ ಇಟ್ಟು, ಸುರಕ್ಷತೆಗೆ ಕ್ರಮ ವಹಿಸುತ್ತಿದ್ದಾರೆ. ಪ್ರತಿನಿತ್ಯ ಹಲವು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಜಿಗಿಯುತ್ತಿರುವುದರಿಂದ ನೆಟ್ ಗುಣಮಟ್ಟ ಕುಸಿದಿದೆ ಎನ್ನಲಾಗಿದೆ. ಜನವರಿ 13ರಿಂದ ನಡೆಯುತ್ತಿರುವ ಈ ಪರೀಕ್ಷೆಯಲ್ಲಿ ದಿನಕ್ಕೆ 15 ರಿಂದ 16 ಮಂದಿ ಗಾಯಗೊಳ್ಳುತ್ತಿದ್ದಾರೆ. ಎರಡು ಅಂತಸ್ತಿನ ಕಟ್ಟಡದಷ್ಟು ಎತ್ತರದಿಂದ ಜಿಗಿಯುವಾಗ ಭಯಪಟ್ಟು ಅಥವಾ ಸರಿಯಾದ ರೀತಿಯಲ್ಲಿ ಜಿಗಿಯದೇ ಇರುವವರು ಗಾಯಗೊಳ್ಳುತ್ತಿದ್ದಾರೆ. ಈ ಪರೀಕ್ಷೆ ಅಂತಿಮವಾದ ಬಳಿಕ ಗಾಯಗೊಂಡವರ ಬಗ್ಗೆ ಸ್ಪಷ್ಟ ಸಂಖ್ಯೆ ಸಿಗಲಿದೆ ಎಂದು ಮುಂಬೈ ಅಗ್ನಿಶಾಮಕ ಸೇವೆಯ ಮುಖ್ಯಸ್ಥ ಸಂಜಯ್ ಮಂಜ್ರೇಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ಜೆಎನ್ಯುನಲ್ಲಿ ವಿವಾದಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನದ ವೇಳೆ ಕಲ್ಲು ತೂರಾಟ: ಆರೋಪ