ಅಹಮದಾಬಾದ್ (ಗುಜರಾತ್): ಇತ್ತೀಚಿಗೆ ಗುಜರಾತ್ನ ರಾಜ್ಯ ಸರಕು ಮತ್ತು ಸೇವಾ ತೆರಿಗೆ ಇಲಾಖೆಯು ಅಹಮದಾಬಾದ್ನಲ್ಲಿ 1400 ಕೋಟಿ ಬೃಹತ್ ಬಿಲ್ಲಿಂಗ್ ಹಗರಣವನ್ನು ಬಯಲಿಗೆಳದಿದೆ. ಈ ಹಗರಣದ ಮಾಸ್ಟರ್ ಮೈಂಡ್ ರಾಕೇಶ್ ಚೋಕ್ಸಿ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಹಗರಣದ ಬಗ್ಗೆ ಮಾತನಾಡಿದ ಎಸ್ಜಿಎಸ್ಟಿ ಅಧಿಕಾರಿ, ‘‘ರಾಕೇಶ್ ಚೋಕ್ಸಿ ನಾಡೋಲ್ ಟ್ರೇಡರ್ಸ್, ಮಂಗಳಂ ಇಂಪ್ಯಾಕ್ಟ್ ಮತ್ತು ಶ್ರೀ ಎಂಟರ್ಪ್ರೈಸಸ್ ಎಂಬ ಮೂರು ನಕಲಿ ಕಂಪನಿಗಳನ್ನು ಸ್ಥಾಪಿಸಿದ್ದರು.
ಈ ಕಂಪನಿಗಳನ್ನು ಆರೋಪಿ ಚೋಕ್ಸಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಆರ್ಥಿಕವಾಗಿ ದುರ್ಬಲ ವ್ಯಕ್ತಿಗಳ ಇತರ ದಾಖಲೆಗಳನ್ನು ಬಳಸಿಕೊಂಡು, ಕಂಪನಿ ಸ್ಥಾಪಿಸಿದ್ದರು. ಅಷ್ಟೇ ಅಲ್ಲ ಈ ಕಂಪನಿಗಳು ಕಾಗದದಲ್ಲಿ ಮಾತ್ರ ಅಸ್ತಿತ್ವದಲ್ಲಿದ್ದವು. ಆರೋಪಿ ಈ ನಕಲಿ ಕಂಪನಿಗಳನ್ನು ಬಳಸಿಕೊಂಡು 41 ಕೋಟಿ ರೂಪಾಯಿ ಮೌಲ್ಯದ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ಗಳನ್ನು ಮೋಸದಿಂದ ಪಡೆದುಕೊಂಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರೋಪಿ ನಿವಾಸ ಮತ್ತು ನಕಲಿ ಕಂಪನಿಗಳ ಮೇಲೆ ಎಸ್ಜಿಎಸ್ಟಿ ಇಲಾಖೆಯ ನಡೆಸಿದ ದಾಳಿಯ ವೇಳೆ ಹೌಸಿಂಗ್ ಸೊಸೈಟಿಯ ಸೆಕ್ಯುರಿಟಿ ಗಾರ್ಡ್ ಕ್ಯಾಬಿನ್ನಲ್ಲಿ ಬಚ್ಚಿಟ್ಟಿದ್ದ ದಾಖಲೆಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಕ್ಯಾಬಿನ್ನಲ್ಲಿದ್ದ ಎಲ್ಲಾ ಡಿಜಿಟಲ್ ದಾಖಲೆಗಳು ಮತ್ತು ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಂಡಿದ್ದಾರೆ. ಚೋಕ್ಸಿಯನ್ನು ಮೆಟ್ರೋಪಾಲಿಟನ್ ಕೋರ್ಟ್ಗೆ ಹಾಜರುಪಡಿಸಲಾಗಿದ್ದು, ಮಾರ್ಚ್ 17ರವರೆಗೆ ನ್ಯಾಯಂಗ ಬಂಧನದಲ್ಲಿರಿಸಲಾಗಿದೆ. ಆರೋಪಿ ಬಂಧನ ಅವಧಿ ಮುಗಿದ ನಂತರ ಅವರನ್ನು ಮತ್ತೆ ನ್ಯಾಯಲಯಕ್ಕೆ ಹಾಜರುಪಡಿಸಲಾಗುತ್ತದೆ. ಈ ಸಂಬಂಧ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.