ಗಾಜಿಯಾಬಾದ್(ಉತ್ತರಪ್ರದೇಶ): ಒಂದು ತಿಂಗಳ ಹಿಂದೆ ನಾಯಿಯಿಂದ ಕಚ್ಚಿಸಿಕೊಂಡಿದ್ದ ಬಗ್ಗೆ ಪೋಷಕರಿಗೆ ತಿಳಿಸದೇ ಮರೆಮಾಚ್ಚಿದ್ದ 14 ವರ್ಷದ ಬಾಲಕ ರೇಬಿಸ್ ರೋಗಕ್ಕೆ ತುತ್ತಾಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಘಟನೆಯ ಸಂಬಂಧ ವಿಡಿಯೋವೊಂದು ವೈರಲ್ ಆಗಿದೆ. ಅದವರಲ್ಲಿ ಬಾಲಕ ತನ್ನ ತಂದೆಯ ಮಡಿಲಲ್ಲಿ ಉಸಿರಾಡಲು ಹೆಣಗಾಡುತ್ತಿರುವ, ಬಾಲಕನ ತಂದೆ ಮಾಸ್ಕ್ ಮತ್ತು ಕೈಗವಸುಗಳನ್ನು ಧರಿಸಿ ಮಗನನ್ನು ಹಿಡಿದುಕೊಂಡು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವ ಹಾಗೂ ತನ್ನ ಹದಿಹರೆಯದ ಮಗ ರೇಬಿಸ್ನಿಂದ ನರಳುತ್ತಿರುವದನ್ನು ನೋಡಿ ತಂದೆ ಕಣ್ಣೀರಿಡುತ್ತಿರುವ ಹೃದಯ ವಿದ್ರಾವಕ ದೃಶ್ಯಗಳಿವೆ.
ಏನಿದು ಪ್ರಕರಣ?:ವಿಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚರಣ್ ಸಿಂಗ್ ಕಾಲೋನಿ ನಿವಾಸಿ ಶಹವಾಜ್ ಒಂದೂವರೆ ತಿಂಗಳ ಹಿಂದೆ ನಾಯಿಯಿಂದ ಕಚ್ಚಿಸಿಕೊಂಡಿದ್ದನು. ಆದರೆ, ಭಯದಿಂದ ಬಾಲಕ ಈ ವಿಷಯವನ್ನು ಪೋಷಕರಿಗೆ ತಿಳಿಸಿರಲಿಲ್ಲ. ರೇಬೀಸ್ ಸೋಂಕಿಗೆ ತುತ್ತಾಗಿದ್ದ ಬಾಲಕ ಅಸಹಜವಾಗಿ ವರ್ತಿಸಲು ಪ್ರಾರಂಭಿಸಿದ್ದಾನೆ ಮತ್ತು ಸೆಪ್ಟೆಂಬರ್ 1ರಿಂದ ಆಹಾರ ಸೇವಿಸುವುದನ್ನು ನಿಲ್ಲಿಸಿದ್ದಾನೆ. ಈ ಬಗ್ಗೆ ಪೋಷಕರು ಬಾಲಕನನ್ನು ವಿಚಾರಿಸಿದಾಗ, ನಾಯಿಯಿಂದ ಕಚ್ಚಿಸಿಕೊಂಡಿರುವ ಬಗ್ಗೆ ಬಾಲಕ ತಿಳಿಸಿದ್ದಾನೆ.
ನಂತರ ಬಾಲಕ ಶಹವಾಜ್ನನ್ನು ಪೋಷಕರು ದೆಹಲಿಯ ಸರ್ಕಾರಿ ಆಸ್ಪತ್ರೆಗಳಿಗೆ ಕರೆದೊಯ್ದಿದ್ದಾರೆ. ಆದರೆ, ಅಲ್ಲಿ ಬಾಲಕನನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿಲ್ಲ. ನಂತರ ಪೋಷಕರು ಬಾಲಕನನ್ನು ಬುಲಂದ್‌ಶಹರ್‌ನಲ್ಲಿರುವ ಆಯುರ್ವೇದ ವೈದ್ಯರ ಬಳಿಗೆ ಕರೆತಂದಿದ್ದಾರೆ. ನಂತರ ಅಲ್ಲಿಂದ ಆಂಬ್ಯುಲೆನ್ಸ್‌ನಲ್ಲಿ ಗಾಜಿಯಾಬಾದ್‌ಗೆ ವಾಪಸ್ ಕರೆತರುವಾಗ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.