ಕರ್ನಾಟಕ

karnataka

ETV Bharat / bharat

ವಡೋದರಾದಲ್ಲಿ ದೋಣಿ ದುರಂತ: 13 ಶಾಲಾ ಮಕ್ಕಳು, ಇಬ್ಬರು ಶಿಕ್ಷಕರು ಸಾವು

Boat Overturns in Vadodara Lake: ಗುಜರಾತಿನ ವಡೋದರಾದಲ್ಲಿ ದೋಣಿ ಮಗುಚಿ ಬಿದ್ದು 13 ಶಾಲಾ ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸಾವನ್ನಪ್ಪಿರುವ ಘಟನೆ ಜರುಗಿದೆ.

By ETV Bharat Karnataka Team

Published : Jan 18, 2024, 7:55 PM IST

Updated : Jan 18, 2024, 10:37 PM IST

Etv Bharat
Etv Bharat

ವಡೋದರಾ (ಗುಜರಾತ್​): ದೋಣಿ ಮಗುಚಿ ಬಿದ್ದ ಪರಿಣಾಮ ಸುಮಾರು 13 ಶಾಲಾ ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸಾವನ್ನಪ್ಪಿರುವ ಘಟನೆ ಗುಜರಾತಿನ ವಡೋದರಾದಲ್ಲಿ ನಡೆದಿದೆ. ನಗರದ ಹೊರವಲಯದಲ್ಲಿರುವ ಸರೋವರದಲ್ಲಿ ಗುರುವಾರ ದುರಂತ ಸಂಭವಿಸಿದೆ. ಉಳಿದ ವಿದ್ಯಾರ್ಥಿಗಳ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ನ್ಯೂ ಸನ್‌ರೈಸ್ ಶಾಲೆಯ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಇಲ್ಲಿನ ಹರ್ನಿ ಮೋಟ್‌ನಾಥ್ ಸರೋವರಕ್ಕೆ ಶಾಲೆಯಿಂದ ಪಿಕ್ನಿಕ್‌ಗೆ ಬಂದಿದ್ದರು. ಸಂಜೆ 4:30ರ ಸುಮಾರಿಗೆ 23 ವಿದ್ಯಾರ್ಥಿಗಳು ಹಾಗೂ ನಾಲ್ವರು ಶಿಕ್ಷಕರಿದ್ದ ದೋಣಿ ಮಗುಚಿ ಈ ದುರಂತ ಜರುಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ವಡೋದರಾ ಪಾಲಿಕೆ ಮತ್ತು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ನಂತರದಲ್ಲಿ ಸಮರೋಪಾದಿಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಸಿಬ್ಬಂದಿ ಪ್ರಾರಂಭಿಸಿದ್ದಾರೆ.

ದುರಂತಕ್ಕೆ ಈಡಾದ ದೋಣಿಯು ಕೇವಲ 14 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿತ್ತು. ಆದರೆ, ಅದರಲ್ಲಿ 23 ವಿದ್ಯಾರ್ಥಿಗಳು ಹಾಗೂ ನಾಲ್ವರು ಶಿಕ್ಷಕರು ಇದ್ದರು. ಇದು ಕಿಕ್ಕಿರಿದು ತುಂಬಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪುವ ಮೊದಲೇ ಸ್ಥಳೀಯ ನಿವಾಸಿಗಳು ಕೆಲವು ಮಕ್ಕಳನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ, ವಿಷಯ ತಿಳಿದ ಮಕ್ಕಳ ಪೋಷಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಘಟನಾ ಸ್ಥಳದಲ್ಲಿ ನೆರೆದಿದ್ದಾರೆ.

ಈ ಘಟನೆ ಕುರಿತು ಗುಜರಾತ್ ಶಿಕ್ಷಣ ಸಚಿವ ಕುಬೇರ್ ದಿಂಡೋರ್ ಪ್ರತಿಕ್ರಿಯಿಸಿ, ಸದ್ಯಕ್ಕೆ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಇತರ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ, ಜಿಲ್ಲಾಧಿಕಾರಿ ಎ.ಬಿ.ಗೋರ್ ಮಾತನಾಡಿ, ದೋಣಿಯಲ್ಲಿ ಒಟ್ಟು 27 ಜನರಿದ್ದ ಮಾಹಿತಿ ಲಭ್ಯವಾಗಿದೆ. ಶಾಲಾ ವಿದ್ಯಾರ್ಥಿಗಳು ಇಲ್ಲಿಗೆ ವಿಹಾರಕ್ಕೆ ಎಂದು ಬಂದಿದ್ದರು. ಈ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ದೋಣಿ ಕೆರೆಯಲ್ಲಿ ಪಲ್ಟಿಯಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ವಡೋದರದ ಮುಖ್ಯ ಅಗ್ನಿಶಾಮಕ ಅಧಿಕಾರಿ ಪಾರ್ಥ್ ಬ್ರಹ್ಮಭಟ್ ಪ್ರತಿಕ್ರಿಯಿಸಿ, ಅಗ್ನಿಶಾಮಕ ದಳವು ಇದುವರೆಗೆ ಏಳು ವಿದ್ಯಾರ್ಥಿಗಳನ್ನು ರಕ್ಷಿಸಿದೆ. ನಾಪತ್ತೆಯಾದವರಿಗಾಗಿ ಶೋಧ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಷ್ಟ್ರಪತಿ ಸಂತಾಪ:ಗುಜರಾತ್‌ನ ವಡೋದರಾದಲ್ಲಿ ದೋಣಿ ದುರಂತದಲ್ಲಿ ಮಕ್ಕಳು ಮತ್ತು ಶಿಕ್ಷಕರ ಸಾವಿನ ಸುದ್ದಿ ಅತ್ಯಂತ ದುಃಖಕರ. ನಾನು ದುಃಖಿತ ಕುಟುಂಬಗಳಿಗೆ ನನ್ನ ಸಂತಾಪ ಸೂಚಿಸುತ್ತೇನೆ. ಉಳಿದವರ ರಕ್ಷಣಾ ಕಾರ್ಯ ಯಶಸ್ವಿಯಾಗಬೇಕೆಂದು ಹಾರೈಸುತ್ತೇನೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ವಡೋದರಾದ ಹರ್ನಿ ಸರೋವರದಲ್ಲಿ ದೋಣಿ ಮುಳುಗಿ ಸಂಭವಿಸಿದ ಪ್ರಾಣಹಾನಿಯಿಂದ ಪ್ರಧಾನಿ ದಿಗ್ಭ್ರಂತರಾಗಿದ್ದಾರೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ಸಂತ್ರಸ್ತರಿಗೆ ಸ್ಥಳೀಯ ಆಡಳಿತ ಎಲ್ಲ ರೀತಿಯ ನೆರವು ನೀಡುತ್ತಿದೆ. ಪ್ರಧಾನಿ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50,000 ರೂ. ಪರಿಹಾರ ನೀಡಲಾಗುವುದು ಎಂದು ಪ್ರಧಾನಿ ಕಾರ್ಯಾಲಯ (ಪಿಎಂಒ) ಪೋಸ್ಟ್​ ಮಾಡಿದೆ.

ಇದನ್ನೂ ಓದಿ:ಹಠಾತ್ ಹೃದಯಾಘಾತ: ಕೋಚಿಂಗ್ ಸೆಂಟರ್​ನಲ್ಲಿ ಕುಸಿದು ಬಿದ್ದು ವಿದ್ಯಾರ್ಥಿ ಸಾವು

Last Updated : Jan 18, 2024, 10:37 PM IST

ABOUT THE AUTHOR

...view details