ಬುಲ್ದಾನ (ಮಹಾರಾಷ್ಟ್ರ): ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸಮೃದ್ಧಿ ಹೆದ್ದಾರಿಯಲ್ಲಿ ಕಾರೊಂದು ಪಲ್ಟಿಯಾಗಿ ಮಕ್ಕಳು ಸೇರಿದಂತೆ ಆರು ಜನರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇತರ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಲ್ಲಿನ ಮೆಹ್ಕರ್ ಸಮೀಪದ ಸಿವಾನಿ ಪಿಸಾ ಗ್ರಾಮದ ಬಳಿ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಕಾರೊಂದು ಅಪಘಾತಕ್ಕೀಡಾಗಿದೆ. ಔರಂಗಾಬಾದ್‌ನಿಂದ ಹೊರಟಿದ್ದ ಕಾರು ಹಲವಾರು ಬಾರಿ ಪಲ್ಟಿ ಹೊಡೆದು ಡಿವೈಡರ್ ದಾಟಿ ರಸ್ತೆಯ ಇನ್ನೊಂದು ಬದಿಯಲ್ಲಿ ಬಿದ್ದಿದೆ. ಬರ್ವೆ ಮತ್ತು ಬೋರುಡೆ ಗ್ರಾಮದ ಕುಟುಂಬಸ್ಥರು ಔರಂಗಾಬಾದ್‌ನಿಂದ ಶೇಗಾಂವ್‌ಗೆ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬುಲ್ದಾನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾರಂಗ್ ಅವದ್ ಹಾಗೂ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದರು. ಗಾಯಾಳುಗಳನ್ನು ಆಂಬ್ಯುಲೆನ್ಸ್‌ನಲ್ಲಿ ಔರಂಗಾಬಾದ್‌ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಸದ್ಯಕ್ಕೆ ಈ ಅಪಘಾತಕ್ಕೆ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಐವರ ದುರ್ಮರಣ: ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯಲ್ಲಿ ಕಾರು ಅಪಘಾತಕ್ಕೀಡಾಗಿದೆ. ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇಯಲ್ಲಿ ಭಾನುವಾರ ಸ್ವಿಫ್ಟ್ ಡಿಜೈರ್ ಕಾರೊಂದು ನಿಂತಿದ್ದ ಡಂಪರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ಸಾವನ್ನಪ್ಪಿದ್ದಾರೆ.
ಮೃತರನ್ನು ಬಿಹಾರದ ಸಸಾರಾಮ್ ನಿವಾಸಿಗಲಾದ ಸಾಹಿಲ್ ಖಾನ್ (19), ಚಾಲಕ ಶಾರುಖ್ ಚಾಲಕ (25), ಸೈನಾ ಖಾತೂನ್ (37), ರುಖ್ಸಾರ್ (31) ಹಾಗೂ ಜಮಾಲ್ ಎಂದು ಗುರುತಿಸಲಾಗಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಅಖಂಡ ನಗರ ಪೊಲೀಸ್ ಠಾಣೆಯ ಸಂತೋಷ್ ಕುಮಾರ್ ಸಿಂಗ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.
ಸಸಾರಾಮ್ ನಿವಾಸಿ ಸಲೀಂ ಅವರ ಮೂರೂವರೆ ತಿಂಗಳ ಮಗ ಎಹ್ಸಾನ್ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಮಗುವನ್ನು ಕುಟುಂಬಸ್ಥರು ದೆಹಲಿಯ ಏಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದಾದ ನಂತರ ಎಲ್ಲರೂ ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಅತಿಯಾದ ವೇಗದಿಂದ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಂಧ್ರದಲ್ಲಿ ಮೂವರ ಸಾವು: ಮತ್ತೊಂದೆಡೆ, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲೂ ಟ್ಯಾಂಕರ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದೆ. ಇದರಲ್ಲಿ ತಿರುಪತಿಗೆ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಮದ್ದೂರಿನ ನಿವಾಸಿಗಳೆಂದು ಗುರುತಿಸಲಾಗಿದೆ.
ಭಾನುವಾರ ಬೆಳಗ್ಗೆ ಎಲ್ಲರೂ ಕಾರಿನಲ್ಲಿ ತಿರುಮಲಕ್ಕೆ ಬರುತ್ತಿದ್ದಾಗ ಚಿತ್ತೂರು ಜಿಲ್ಲೆಯ ಧರ್ಮಪುರಂ ಕ್ರಾಸ್‌ನಲ್ಲಿ ಆಯಿಲ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಕೂಡ ಸಾವಿಗೀಡಾಗಿದ್ದಾರೆ. ಟ್ಯಾಂಕರ್ ಗುದ್ದಿದ ರಭಸಕ್ಕೆ ಕಾರಿನಲ್ಲೇ ಮೃತದೇಹಗಳು ಸಿಲುಕಿದ್ದವು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಜೆಸಿಬಿ ಸಹಾಯದಿಂದ ಮೃತದೇಹಗಳನ್ನು ಕಾರಿನಿಂದ ಹೊರತೆಗೆದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಬೆಂಗಳೂರು: ವಕೀಲನ ಕಾರು ಅಡ್ಡಗಟ್ಟಿ ಹಲ್ಲೆ ಯತ್ನ, ದೂರು ದಾಖಲು