ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ರಾಷ್ಟ್ರಗೀತೆಗೆ ಅಗೌರವ ತೋರಿದ 14 ಜನರನ್ನು ಬಂಧಿಸಿರುವ ಘಟನೆ ಶ್ರೀನಗರದಲ್ಲಿ ನಡೆದಿದೆ. ಕಳೆದ ತಿಂಗಳು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಗಾಯನ ಸಂದರ್ಭ ಕೆಲವರು ಎದ್ದು ನಿಲ್ಲದೇ ಅಗೌರವ ತೋರಿಸಿದ್ದರು. ಇದೀಗ ಘಟನೆ ಸಂಬಂಧ ಎಲ್ಲರನ್ನೂ ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗುರುವಾರ ಹೇಳಿದ್ದಾರೆ.
ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, "ಜೂನ್ 25ರಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪೆಡಲ್ ಫಾರ್ ಪೀಸ್ ಸೈಕ್ಲಿಂಗ್ ಸಮಾರಂಭದ ಸಮಾರೋಪ ಸಮಾರಂಭ ಕಾರ್ಯಕ್ರಮ ಆಯೋಜಿಸಿದ್ದರು. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭಾಗಿಯಾಗಿದ್ದರು. ರಾಷ್ಟ್ರಗೀತೆ ಹೇಳುತ್ತಿದ್ದ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಲವರು ಎದ್ದು ನಿಲ್ಲದೆ ಅಗೌರವ ತೋರಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಮ್ಮು ಮತ್ತು ಕಾಶ್ಮೀರ ಆಡಳಿತವು ಅಗೌರವ ಪ್ರದರ್ಶಿಸಿದವರ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಅಲ್ಲದೇ ಕೆಲವು ಪೊಲೀಸ್ ಸಿಬ್ಬಂದಿಯನ್ನು ಕೂಡಾ ಅಮಾನತುಗೊಳಿಸಲಾಗಿದೆ. ರಾಷ್ಟ್ರಗೀತೆ ಪ್ರಾರಂಭಕ್ಕೂ ಮುನ್ನ ಎಲ್ಲರೂ ಎದ್ದುನಿಂತಿರುವುದನ್ನು ಖಚಿತಪಡಿಸದೇ ಸಿಬ್ಬಂದಿ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಅಮಾನತು ಮಾಡಲಾಗಿದೆ" ಎಂದು ಅವರು ತಿಳಿಸಿದರು.