ನವದೆಹಲಿ:ಕಳೆದ ಒಂದು ವಾರದಿಂದ ಸಿಬಿಐ ಕಸ್ಟಡಿಯಲ್ಲಿದ್ದ ಆಮ್ ಆದ್ಮಿ ಪಕ್ಷದ ನಾಯಕ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ನೀಡಲಾಗಿದ್ದು, ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿದೆ. ಮದ್ಯ ನೀತಿ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿ ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದರು. ಸಿಬಿಐ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಸಿಸೋಡಿಯಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದೀಗ ವಿಶೇಷ ನ್ಯಾಯಾಲಯ ಇಂದು ಮಧ್ಯಾಹ್ನ ಸಿಸೋಡಿಯಾ ಅವರಿಗೆ ಮಾರ್ಚ್ 20 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ, ತಿಹಾರ್ ಜೈಲಿಗೆ ಕಳುಹಿಸಿದೆ.
ಭಗವದ್ಗೀತೆ ಕೊಂಡೊಯ್ಯಲು ಅನುಮತಿ: ಸಿಸೋಡಿಯಾ ಅವರನ್ನು ಈಗಾಗಲೇ ತಿಹಾರ್ ಜೈಲಿಗೆ ಕರೆದೊಯ್ಯಲಾಗಿದ್ದು, ಅವರನ್ನು ನಂ. 1 ಜೈಲಿನಲ್ಲಿ ಇರಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಎಎಪಿ ನಾಯಕ ಸಿಸೋಡಿಯಾ ಅವರ ವೈದ್ಯಕೀಯ ಪರೀಕ್ಷೆಯ ವೇಳೆ ಸೂಚಿಸಿದ ಔಷಧಗಳನ್ನು ಕೊಂಡೊಯ್ಯಲು ಕೋರ್ಟ್ ಅನುಮತಿ ನೀಡಿದೆ. ಒಂದು ಜೊತೆ ಕನ್ನಡಕ, ಡೈರಿ, ಪೆನ್ನು ಮತ್ತು ಭಗವದ್ಗೀತೆಯ ಪ್ರತಿಯನ್ನು ಕೊಂಡೊಯ್ಯಲು ಸಹ ಅನುಮತಿ ನೀಡಲಾಗಿದೆ. ಸಿಸೋಡಿಯಾ ಅವರ ವಕೀಲರ ಕೋರಿಕೆಯಂತೆ, ಅವರನ್ನು ಮೆಡಿಟೇಶನ್ ಸೆಲ್ನಲ್ಲಿ ಇರಿಸುವ ಕೋರಿಕೆಯನ್ನು ಪರಿಗಣಿಸುವಂತೆ ನ್ಯಾಯಾಲಯ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ವಿಚಾರಣೆಯ ಸಂದರ್ಭದಲ್ಲಿ, 'ಸದ್ಯ ಸಂಸ್ಥೆ ಸಿಸೋಡಿಯಾ ಅವರನ್ನು ಹೆಚ್ಚಿನ ಕಸ್ಟಡಿಗೆ ಕೇಳುತ್ತಿಲ್ಲ. ಆದರೆ ಭವಿಷ್ಯದಲ್ಲಿ ಕೇಳುತ್ತೇವೆ. ಆರೋಪಿ ವ್ಯಕ್ತಿಯ ನಡವಳಿಕೆ ಸರಿಯಾಗಿಲ್ಲ. ಅವರು ಸಾಕ್ಷಿಗಳನ್ನು ಭಯಭೀತಗೊಳಿಸುತ್ತಿದ್ದಾರೆ. ವಿಚಾರಣೆಗೆ ರಾಜಕೀಯ ಬಣ್ಣ ನೀಡುತ್ತಿದ್ದಾರೆ' ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. 'ಇಡೀ ದಿನ ಬೆಳಗ್ಗೆಯಿಂದ ಸಂಜೆಯವರೆಗೆ ನನಗೆ ಒಂದೇ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಇದು ನನಗೆ ಮಾನಸಿಕ ಕಿರುಕುಳವಾಗಿದೆ' ಎಂದು ಸಿಸೋಡಿಯಾ ಅವರ ಸಿಬಿಐ ಬಂಧನವನ್ನು ಶನಿವಾರ ಇನ್ನೂ ಎರಡು ದಿನಗಳವರೆಗೆ ವಿಸ್ತರಿಸಿದ ಕೂಡಲೇ ಹೇಳಿದ್ದರು. ನ್ಯಾಯಾಲಯವು ಈ ಹಿಂದೆ ಅನುಮತಿಸಿದ್ದ 7 ದಿನಗಳ ಕಸ್ಟಡಿ ವಿಚಾರಣೆಯ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ಇಂದು ವಿಶೇಷ ನ್ಯಾಯಾಧೀಶ ಎಂ.ಕೆ. ನಾಗ್ಪಾಲ್ ಅವರ ಮುಂದೆ ಹಾಜರುಪಡಿಸಲಾಯಿತು.