ಸೂರತ್ (ಗುಜರಾತ್):ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ಆಗಿರುವ ದ್ರೌಪದಿ ಮುರ್ಮು ಕುರಿತು ಗುಜರಾತ್ನ ಸೂರತ್ ಮೂಲದ 13 ವರ್ಷದ ಬಾಲಕಿ ಪುಸ್ತಕ ಬರೆದು, ಅದನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅಲ್ಲದೇ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಟ್ಯಾಗ್ ಮಾಡಿ, ಸೋಮವಾರ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಮುರ್ಮು ಅವರಿಗೆ ಬೆಂಬಲ ನೀಡುವಂತೆ ಬಾಲಕಿ ಕೋರಿದ್ದಾರೆ.
ಭಾವಿಕಾ ಮಹೇಶ್ವರಿ ಎಂಬ ಬಾಲಕಿಯೇ ಮುರ್ಮು ಕುರಿತ ಪರಿಚಯ ಪುಸ್ತಕ ಬರೆದು ಗಮನ ಸೆಳೆದಿದ್ದಾರೆ. ಈ ಬಗ್ಗೆ ಮಾತನಾಡಿರುವ ಭಾವಿಕಾ, ಇತ್ತೀಚೆಗೆ ದೆಹಲಿಯ ರಾಷ್ಟ್ರಪತಿ ಭವನಕ್ಕೆ ಕುಟುಂಬದೊಂದಿಗೆ ಭೇಟಿ ನೀಡಿದ್ದೆ. ಆಗ ದ್ರೌಪದಿ ಮುರ್ಮು ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಗ್ಗೆ ತಂದೆ ತಿಳಿಸಿದರು. ಅಲ್ಲದೇ, ಮುರ್ಮು ಚುನಾಯಿತರಾದರೆ ಬುಡಕಟ್ಟು ಸಮುದಾಯದಿಂದ ಆಯ್ಕೆಯಾದ ಮೊದಲ ರಾಷ್ಟ್ರಪತಿಯಾಗಲಿದ್ದಾರೆ ಎಂದು ತಂದೆ ಹೇಳಿದರು. ಇದುವೇ ನನಗೆ ಪುಸ್ತಕ ಬರೆಯಲು ಪ್ರೇರಣೆ ನೀಡಿತು ಎಂದು ತಿಳಿಸಿದರು.