ಇಂಫಾಲ:ಜನಾಂಗೀಯ ಸಂಘರ್ಷಕ್ಕೀಡಾಗಿ ಹಿಂಸಾಚಾರ ಅನುಭವಿಸಿದ್ದ ಮಣಿಪುರದಲ್ಲಿ ಮತ್ತೆ ಗಲಾಟೆ ಮರುಕಳಿಸಿದೆ. ಕೆಲ ದಿನಗಳಿಂದ ಶಾಂತವಾಗಿದ್ದ ಗುಡ್ಡಗಾಡು ರಾಜ್ಯ ಮಣಿಪುರದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿ ಬಂದಿದೆ. ಸೋಮವಾರ ನಡೆದ ದಾಳಿಯಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. ಭದ್ರತಾ ಪಡೆಯಿಂದ ಘಟನೆ ನಡೆದ ಗ್ರಾಮದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ತೆಂಗನೌಪಾಲ್ ಜಿಲ್ಲೆಯ ಲೀತು ಎಂಬ ಗ್ರಾಮದಲ್ಲಿ ಸೋಮವಾರ ಈ ದಾಳಿ ನಡೆದಿದೆ. ಮ್ಯಾನ್ಮಾರ್ಗೆ ತೆರಳುತ್ತಿದ್ದ ಗುಂಪಿನ ಮೇಲೆ ಬಂಡುಕೋರರ ಪಡೆ ಗುಂಡಿನ ದಾಳಿ ಮಾಡಿದೆ. ಇದರಿಂದ ಸ್ಥಳದಲ್ಲೇ 13 ಮಂದಿ ಪ್ರಾಣ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಾಳಿಯ ವೇಳೆ ಎರಡೂ ಗುಂಪುಗಳ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಸಾವಿಗೀಡಾದವರ ಗುರುತು ಪತ್ತೆಯಾಗಿಲ್ಲ. ಇವರ್ಯಾರೂ ಸ್ಥಳೀಯರಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಭದ್ರತಾ ಪಡೆಗಳು ಇದುವರೆಗೆ 13 ಶವಗಳನ್ನು ಪತ್ತೆ ಮಾಡಿವೆ ಎಂದು ಮಾಹಿತಿ ನೀಡಿದ್ದಾರೆ. ತೆಂಗನೌಪಾಲ್ ಜಿಲ್ಲೆ ಮ್ಯಾನ್ಮಾರ್‌ನೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಸಂಘರ್ಷದ ಕಿಡಿ:ರಾಜ್ಯದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಮೇ 3 ರಿಂದ ಮೈಥೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಜನಾಂಗೀಯ ಘರ್ಷಣೆ ಆರಂಭವಾಗಿತ್ತು. ಘರ್ಷಣೆಯಲ್ಲಿ ಕನಿಷ್ಠ 182 ಮಂದಿ ಬಲಿಯಾಗಿದ್ದಾರೆ. ಸುಮಾರು 50,000 ಮಂದಿ ನಿರಾಶ್ರಿತರಾಗಿದ್ದಾರೆ. ಕೆಲ ಜಿಲ್ಲೆಗಳ ಗಡಿ ಪ್ರದೇಶಗಳನ್ನು ಹೊರತುಪಡಿಸಿ 7 ತಿಂಗಳವರೆಗೆ ಇಂಟರ್ನೆಟ್ ಸೇವೆಯನ್ನು ಅಮಾನತು ಮಾಡಿದ್ದರು.
ಕೇಂದ್ರ, ರಾಜ್ಯ ಸರ್ಕಾರಗಳು ನಡೆಸಿದ ಹಲವು ಶಾಂತಿ ಸಂಧಾನ ಮತ್ತು ಭರವಸೆಗಳನ್ನು ನೀಡಿದ ಬಳಿಕ ಈಚೆಗೆ ರಾಜ್ಯದಲ್ಲಿ ಶಾಂತಿ ನೆಲೆಗೊಂಡಿತ್ತು. ಬಳಿಕ ಎಲ್ಲೆಡೆ ಹೇರಲಾಗಿದ್ದ ನಿಷೇಧಗಳನ್ನು ತೆರವು ಮಾಡಲಾಗಿತ್ತು. ಇಲ್ಲಿ ನಡೆದ ಹಿಂಸಾಚಾರ, ಗುಂಡಿನ ಚಕಮಕಿ, ಬೆಂಕಿ ಹಚ್ಚುವಿಕೆ ಮತ್ತು ಅಪಹರಣಗಳು ದೇಶದಲ್ಲಿ ಭಾರೀ ಸದ್ದು ಮಾಡಿತ್ತು. ಈ ಕುರಿತ ಚರ್ಚೆಯಿಂದಾಗಿ ಮಳೆಗಾಲದ ಸಂಸತ್ ಅಧಿವೇಶನವೇ ಬಲಿಯಾಗಿತ್ತು.
ರಾಜ್ಯದ ಅತ್ಯಂತ ಹಳೆಯ ನಿಷೇಧಿತ ಉಗ್ರಗಾಮಿ ಸಂಘಟನೆಯಾದ ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫೋರ್ಸ್ (ಯುಎನ್‌ಎಲ್‌ಎಫ್) ನೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಶಾಂತಿ ಒಪ್ಪಂದ ಮಾಡಿಕೊಳ್ಳಲಾಯಿತು. ಉಗ್ರರು ತಮ್ಮಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಸರ್ಕಾರದ ವಶಕ್ಕೆ ನೀಡಿದ್ದರು. ಬಳಿಕ ಸಂಘಟನೆಯ ಮೇಲಿನ ನಿಷೇಧವನ್ನು ತೆರವು ಮಾಡಲಾಗಿತ್ತು.
ಇದನ್ನೂ ಓದಿ:ಶಾಂತಿಯುತ ಪ್ರದೇಶಗಳಲ್ಲಿ ಇಂಟರ್ನೆಟ್ ನಿರ್ಬಂಧ ಸಡಿಲಿಸಿ: ಮಣಿಪುರ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ