ಕರ್ನಾಟಕ

karnataka

ETV Bharat / bharat

Women Missing: 2019 ರಿಂದ 2021ರ ಮಧ್ಯೆ 13.13 ಲಕ್ಷ ಹೆಣ್ಣು ಮಕ್ಕಳು ನಾಪತ್ತೆ.. ಸಂಸತ್ತಿಗೆ ಕೇಂದ್ರ ಸರ್ಕಾರದ ಮಾಹಿತಿ - ಕೇಂದ್ರ ಗೃಹ ಸಚಿವಾಲಯ

ದೇಶದಲ್ಲಿ 2019 ಮತ್ತು 2021ರ ನಡುವಿನ ಮೂರು ವರ್ಷಗಳಲ್ಲಿ 13.13 ಲಕ್ಷಕ್ಕೂ ಹೆಚ್ಚು ಬಾಲಕಿಯರು ಮತ್ತು ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯವು ಸಂಸತ್ತಿಗೆ ಮಾಹಿತಿ ನೀಡಿದೆ.

13.13 lakh girls, women went missing between 2019 and 2021: Govt data
2019ರಿಂದ 2021ರ ಮಧ್ಯೆ 13.13 ಲಕ್ಷ ಹೆಣ್ಣು ಮಕ್ಕಳು ನಾಪತ್ತೆ: ಸಂಸತ್ತಿಗೆ ಕೇಂದ್ರ ಸರ್ಕಾರದ ಮಾಹಿತಿ

By

Published : Jul 30, 2023, 7:27 PM IST

ನವದೆಹಲಿ: ದೇಶದಲ್ಲಿನ ಹೆಣ್ಣು ಮಕ್ಕಳ ನಾಪತ್ತೆ ಬಗ್ಗೆ ಆಘಾತಕಾರಿ ಅಂಕಿ-ಅಂಶವನ್ನು ಕೇಂದ್ರ ಸರ್ಕಾರ ನೀಡಿದೆ. 2019 ಮತ್ತು 2021ರ ನಡುವಿನ ಮೂರು ವರ್ಷಗಳಲ್ಲಿ ದೇಶದಲ್ಲಿ 13.13 ಲಕ್ಷಕ್ಕೂ ಹೆಚ್ಚು ಬಾಲಕಿಯರು ಮತ್ತು ಮಹಿಳೆಯರು ನಾಪತ್ತೆಯಾಗಿದ್ದಾರೆ. ಈ ಪೈಕಿ ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಎಂದರೆ ಸುಮಾರು ಎರಡು ಲಕ್ಷದಷ್ಟು ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ. ಬಾಲಕಿಯರು ಮತ್ತು ಮಹಿಳೆಯರ ನಾಪತ್ತೆ ಪ್ರಕರಣಗಳ ಪಟ್ಟಿಯಲ್ಲಿ ಪಶ್ಚಿಮ ಬಂಗಾಳ ಎರಡನೇ ಸ್ಥಾನವನ್ನು ಹೊಂದಿದೆ.

ಕಳೆದ ವಾರ ಸಂಸತ್ತಿನಲ್ಲಿ ಮಂಡಿಸಲಾದ ಕೇಂದ್ರ ಗೃಹ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ದೇಶಾದ್ಯಂತ 2019 ಮತ್ತು 2021ರ ಮಧ್ಯೆ 18 ವರ್ಷಕ್ಕಿಂತ ಮೇಲ್ಪಟ್ಟ 10,61,648 ಮಹಿಳೆಯರು ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ 2,51,430 ಹುಡುಗಿಯರು ನಾಪತ್ತೆಯಾಗಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (National Crime Records Bureau - NCRB) ಈ ಅಂಕಿ-ಅಂಶ ಸಂಗ್ರಹಿಸಿದೆ.

ಮಧ್ಯಪ್ರದೇಶದಲ್ಲಿ 2019ರಿಂದ 2021ರವರೆಗೆ 1,60,180 ಮಹಿಳೆಯರು ಮತ್ತು 38,234 ಬಾಲಕಿಯರು ನಾಪತ್ತೆಯಾಗಿದ್ದರೆ, ಇದೇ ಅವಧಿಯಲ್ಲಿ ಪಶ್ಚಿಮ ಬಂಗಾಳದಲ್ಲಿ 1,56,905 ಮಹಿಳೆಯರು ಮತ್ತು 36,606 ಹುಡುಗಿಯರು ಕಾಣೆಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ 1,78,400 ಮಹಿಳೆಯರು ಮತ್ತು 13,033 ಯುವತಿಯರು ನಾಪತ್ತೆಗೊಂಡಿದ್ದಾರೆ. ಅದೇ ರೀತಿಯಾಗಿ ಒಡಿಶಾದಲ್ಲಿ ಮೂರು ವರ್ಷಗಳ ಅವಧಿಯಲ್ಲಿ 70,222 ಮಹಿಳೆಯರು ಮತ್ತು 16,649 ಬಾಲಕಿಯರು ಮತ್ತು ಛತ್ತೀಸ್‌ಗಢದಲ್ಲಿ 49,116 ಮಹಿಳೆಯರು ಮತ್ತು 10,817 ಹುಡುಗಿಯರು ಕಾಣೆಯಾಗಿದ್ದಾರೆ.

ಕೇಂದ್ರಾಡಳಿತ ಪ್ರದೇಶಗಳ ಪೈಕಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲೇ ಅತಿ ಹೆಚ್ಚು ಹುಡುಗಿಯರು ಮತ್ತು ಮಹಿಳೆಯರು ನಾಪತ್ತೆಯಾಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಮೂರು ವರ್ಷದಲ್ಲಿ 61,054 ಮಹಿಳೆಯರು ಮತ್ತು 22,919 ಹುಡುಗಿಯರು ನಾಪತ್ತೆಯಾಗಿದ್ದಾರೆ. ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲೂ 8,617 ಮಹಿಳೆಯರು ಮತ್ತು 1,148 ಬಾಲಕಿಯರು ನಾಪತ್ತೆಯಾಗಿದ್ದಾರೆ ಎಂದು ಅಂಕಿ-ಅಂಶಗಳು ಬಹಿರಂಗ ಪಡಿಸಿವೆ.

ಇದೇ ವೇಳೆ ಲೈಂಗಿಕ ಅಪರಾಧಗಳ ವಿರುದ್ಧ ಪರಿಣಾಮಕಾರಿ ತಡೆಗಟ್ಟುವಿಕೆಗಾಗಿ ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯ್ದೆ-2013 ಜಾರಿಗೊಳಿಸುವಿಕೆಯನ್ನು ಒಳಗೊಂಡಂತೆ ದೇಶಾದ್ಯಂತ ಮಹಿಳೆಯರ ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಸರ್ಕಾರ ಸಂಸತ್ತಿಗೆ ತಿಳಿಸಿದೆ. ಇದಲ್ಲದೆ, 2018ರ ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯ್ದೆಯು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಮೇಲಿನ ಅತ್ಯಾಚಾರಕ್ಕೆ ಮರಣದಂಡನೆ ಸೇರಿದಂತೆ ಇನ್ನಷ್ಟು ಕಠಿಣವಾದ ದಂಡದ ನಿಬಂಧನೆಗಳನ್ನು ಒಳಗೊಂಡಿದೆ. ಕಾಯ್ದೆಯು ಪ್ರಕಾರ ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಿ ಚಾರ್ಜ್​ ಶೀಟ್ ಸಲ್ಲಿಸಬೇಕು ಹಾಗೂ ಇನ್ನೆರಡು ತಿಂಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸುವುದು ಕಡ್ಡಾಯಗೊಳಸಲಾಗಿದೆ.

ಸರ್ಕಾರವು ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಪ್ಯಾನ್​ ಇಂಡಿಯಾ ವ್ಯವಸ್ಥೆಯ 112 ಹೆಲ್ಪ್​ ಲೈನ್​ ಶುರು ಮಾಡಲಾಗಿದೆ. ಸ್ಮಾರ್ಟ್ ಪೊಲೀಸಿಂಗ್ ಮತ್ತು ಸುರಕ್ಷತಾ ನಿರ್ವಹಣೆಗೆ ಸಹಾಯ ಮಾಡಲು ತಂತ್ರಜ್ಞಾನವನ್ನು ಬಳಸಿಕೊಂಡು ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಲಖನೌ ಮತ್ತು ಮುಂಬೈ ಸೇರಿ ಎಂಟು ನಗರಗಳಲ್ಲಿ ಸೇಫ್ ಸಿಟಿ ಯೋಜನೆ ಜಾರಿ ಮಾಡಲಾಗಿದೆ. ಗೃಹ ಸಚಿವಾಲಯವು 2018ರಲ್ಲಿ ಅಶ್ಲೀಲತೆ ಪ್ರಕರಣಗಳ ಬಗ್ಗೆ ವರದಿ ಮಾಡಲು ಸೈಬರ್ ಕ್ರೈಮ್​ ಪೋರ್ಟಲ್​ ಪ್ರಾರಂಭಿಸಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ:ಮಗು ನಾಪತ್ತೆ ಪ್ರಕರಣ: ಕಟ್ಟಿದ ಗೋಣಿಚೀಲದಲ್ಲಿ ಶವ ಪತ್ತೆ, ಆರೋಪಿ ಹೇಳಿದ್ದು ಹೀಗೆ..

ABOUT THE AUTHOR

...view details