ನವದೆಹಲಿ:ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣಗಳ ತನಿಖೆ ವಿಳಂಬವಾಗುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. 12 ವರ್ಷಗಳಿಂದ ತನಿಖೆ ವಿಳಂಬವಾಗುತ್ತಿರುವುದರ ವರದಿ ನೀಡಲು ಕೋರ್ಟ್ ಸೂಚಿಸಿದೆ.
2009 ರಲ್ಲಿ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಸಿಬಿಐ ಗಾಲಿ ಜನಾರ್ದನ ರೆಡ್ಡಿ ಹಾಗೂ ಇತರ 9 ಮಂದಿ ವಿರುದ್ಧ ಕೇಸ್ ಜಡಿದಿತ್ತು. ಸೆಪ್ಟೆಂಬರ್ 5, 2011 ರಂದು ಜನಾರ್ದನ ರೆಡ್ಡಿಯನ್ನು ಬಂಧಿಸಲಾಯಿತು. ಬಳಿಕ ಸಾಕ್ಷ್ಯ ನಾಶ ಮಾಡುವ ಶಂಕೆಯ ಮೇಲೆ ಕರ್ನಾಟಕದ ಬಳ್ಳಾರಿ, ಕಡಪ, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಿಗೆ ಭೇಟಿ ನೀಡುವಂತಿಲ್ಲ ಎಂಬ ಷರತ್ತಿನೊಂದಿಗೆ ಸುಪ್ರೀಂಕೋರ್ಟ್ ಜನವರಿ 20, 2015 ರಂದು ಅವರಿಗೆ ಜಾಮೀನು ನೀಡಿತ್ತು.
ರೆಡ್ಡಿ ಮೇಲಿನ ಕೇಸ್ಗಳ ವಿಚಾರಣೆಯಲ್ಲಿ 12 ವರ್ಷಗಳ ವಿಳಂಬವಾಗಿದೆ. ಇದು ನಿಜಕ್ಕೂ ಕ್ಷಮಾರ್ಹವಲ್ಲ. ತನಿಖೆ ತ್ವರಿತಕ್ಕೆ ಈ ಹಿಂದೆಯೇ ಆದೇಶ ನೀಡಿದ್ದರೂ ವಿಳಂಬ ಮಾಡುತ್ತಿರುವುದೇಕೆ?. ವಿಚಾರಣೆ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ವರದಿ ನೀಡಲು ತನಿಖಾಧಿಕಾರಿಗಳಿಗೆ ಕೋರ್ಟ್ ಸೂಚಿಸಿತು.
ಯಾವ ಕಾರಣಕ್ಕಾಗಿ ಮಾಜಿ ಸಚಿವರ ವಿರುದ್ಧದ ಕೇಸ್ ವಿಳಂಬವಾಗುತ್ತಿದೆ ಎಂಬುದನ್ನು ಮುಚ್ಚಿದ ಲಕೋಟೆಯಲ್ಲಿ ವರದಿ ನೀಡುವಂತೆ ಹೈದರಾಬಾದ್ನ ಸಿಬಿಐ ಕೋರ್ಟ್ ಆದೇಶಿಸಿತು. ಬಳಿಕ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 20ಕ್ಕೆ ಮುಂದೂಡಿದೆ.
ಜಾಮೀನು ರದ್ದಿಗೆ ಸಿಬಿಐ ಅರ್ಜಿ:ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಅವರಿಗೆ ನೀಡಿದ ಜಾಮೀನಿನ ಷರತ್ತುಗಳನ್ನು ಸಡಿಲ ಮಾಡಬೇಕು ಎಂದು 2020 ರಲ್ಲಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಕಳೆದ ವರ್ಷ ಆಗಸ್ಟ್ನಲ್ಲಿ ಜನಾರ್ದನ ರೆಡ್ಡಿ ಅವರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಿ ಬಳ್ಳಾರಿ, ಕಡಪ ಮತ್ತು ಅನಂತಪುರಕ್ಕೆ ಹೋಗಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು.