ಕರ್ನಾಟಕ

karnataka

ETV Bharat / bharat

ರಕ್ತಸ್ರಾವವಾಗಿ ಬೀದಿ ಅಲೆಯುತ್ತಿದ್ದರೂ ಅತ್ಯಾಚಾರಕ್ಕೊಳಗಾದ ಬಾಲಕಿಗೆ ನೆರವಾಗದ ಜನರು: ಮರೆಯಾದ ಮಾನವೀಯತೆ - Madhya Pradesh rape case

ಅತ್ಯಾಚಾರಕ್ಕೊಳಗಾದ ಬಾಲಕಿಗೆ ನೆರವು ನೀಡದೇ ಕನಿಷ್ಠವಾಗಿ ನಡೆದುಕೊಂಡ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ
12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ

By ETV Bharat Karnataka Team

Published : Sep 27, 2023, 6:07 PM IST

ಉಜ್ಜಯಿನಿ (ಮಧ್ಯಪ್ರದೇಶ) :ಕೆಲವೊಮ್ಮೆ ಸಮಾಜ ಅದೆಷ್ಟು ಕ್ರೂರವಾಗಿ ನಡೆದುಕೊಳ್ಳುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದು, ರಕ್ತಸ್ರಾವವಾಗಿ ಅರೆಬೆತ್ತಲೆ ಸ್ಥಿತಿಯಲ್ಲಿದ್ದ ಆಕೆ ಸಹಾಯ ಕೋರಿ ಬೀದಿ ಬೀದಿ ಅಲೆದಿದ್ದಾಳೆ. ಆದರೆ, ಯಾರೊಬ್ಬರೂ ಆಕೆಗೆ ನೆರವಾಗಿಲ್ಲ. ಬಾಲಕಿಯ ಅಸಹಾಯಕ ಸ್ಥಿತಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿ ನಗರದ ದಂಡಿ ಆಶ್ರಮದ ಬಳಿ ಎಸೆದು ಹೋಗಲಾಗಿದೆ. ಬಳಿಕ ಆಕೆ ನಗರದೊಳಗೆ ಬಂದಿದ್ದಾಳೆ. ಅರೆಬೆತ್ತಲೆ ಸ್ಥಿತಿಯಲ್ಲಿದ್ದ ಬಾಲಕಿ ಜನರಲ್ಲಿ ನೆರವು ಕೋರಿದ್ದಾಳೆ. ಮನೆಯ ಮುಂದೆ ನಿಂತಿದ್ದ ವ್ಯಕ್ತಿಯೊಬ್ಬಾತನ ಬಳಿಗೆ ಹೋದಾಗ ಆತ ಅಲ್ಲಿಂದ ತೆರಳಲು ಸೂಚಿಸಿದ್ದಾನೆ. ಈ ಹೃದಯಹೀನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ವಿಷಯ ತಿಳಿದ ಪೊಲೀಸರು, ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಇಂದೋರ್‌ಗೆ ಕಳುಹಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ಸಚಿನ್ ಶರ್ಮಾ, ಅಪ್ರಾಪ್ತೆಯ ಮೇಲೆ ಅತ್ಯಾಚಾರವಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಬಗ್ಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕೀಚಕರ ಪತ್ತೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಾಲಕಿ ಎಲ್ಲಿಯವಳು ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ, ಆಕೆಯ ಮಾತಿನ ಅನುಸಾರವಾಗಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನವರು ಎಂದು ನಂಬಲಾಗಿದೆ. ಬಾಲಕಿಯ ನೆಲೆಯ ಬಗ್ಗೆಯೂ ತಿಳಿದುಕೊಳ್ಳುವ ಪ್ರಯತ್ನ ನಡೆದಿದೆ. ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ವರದಿ ಕೇಳಿದ ಮಕ್ಕಳ ಹಕ್ಕುಗಳ ಆಯೋಗ:ಇನ್ನು, ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್​ಸಿಪಿಸಿಆರ್​) ಉಜ್ಜಯಿನಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ, ರೇಪ್​ ಮತ್ತು ಬಾಲಕಿಯ ಸ್ಥಿತಿಯ ಕುರಿತಾಗಿ ಆರಂಭಿಕ ವರದಿಯನ್ನೂ ಕೇಳಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದೆ.

ಅಪ್ರಾಪ್ತೆಯ ಮೇಲೆ ಅತ್ಯಾಚಾರವಾಗಿ ಆಕೆ ಬೀದಿಯಲ್ಲಿ ನರಳುತ್ತಾ ನೆರವು ಬೇಡುತ್ತಿದ್ದರೂ, ಯಾರೊಬ್ಬರೂ ಆಕೆಗೆ ಸಹಾಯ ಮಾಡದೇ ಇರುವುದು ಖಂಡನೀಯ ಸಂಗತಿ. ಇದು ಸಮಾಜದ ಕರಾಳ ಮುಖವನ್ನು ತೋರಿಸುತ್ತದೆ ಎಂದು ಮಧ್ಯಪ್ರದೇಶ ಎನ್‌ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ರಾಸುಗಳ ರಕ್ಷಣೆ.. ಇಬ್ಬರನ್ನು ವಶಕ್ಕೆ ಪಡೆದ ಮೈಸೂರು ಪೊಲೀಸರು

ABOUT THE AUTHOR

...view details