ಆಗ್ರಾ(ಉತ್ತರಪ್ರದೇಶ):ಉತ್ತರಪ್ರದೇಶ ಆಗ್ರಾದಲ್ಲಿನ ಕೇಂದ್ರ ಕಾರಾಗೃಹದ 12 ಕೈದಿಗಳು 10ನೇ ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಪಾಸಾಗಿ ಅಚ್ಚರಿ ಮೂಡಿಸಿದ್ದಾರೆ. 10ನೇ ತಗರತಿಯಲ್ಲಿ ಮೂವರು ಕೈದಿಗಳು ಪ್ರಥಮ ಶ್ರೇಣಿ ಪಡೆದರೆ, ಆರು ಮಂದಿ ದ್ವಿತೀಯ ಶ್ರೇಣಿ ಪಡೆದಿದ್ದಾರೆ. 12ನೇ ಕ್ಲಾಸ್ ಪರೀಕ್ಷೆಯಲ್ಲಿ ಮೂವರು ಕೈದಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
10 ಮತ್ತು 12 ನೇ ತಗಗತಿಯ ಬೋರ್ಡ್ ಪರೀಕ್ಷೆಗಳ ಫಲಿತಾಂಶವನ್ನು ಉತ್ತರಪ್ರದೇಶ ಮಾಧ್ಯಮಿಕ ಶಿಕ್ಷಣ ಪರಿಷತ್ ಶನಿವಾರ ಪ್ರಕಟಿಸಿದೆ. ಇದರಲ್ಲಿ ಕೈದಿಗಳು ಕೂಡ ಪರೀಕ್ಷೆಗೆ ಕುಳಿತಿದ್ದರು. ಇಂದು ಫಲಿತಾಂಶ ಹೊರಬಿದ್ದಿದ್ದು, 12 ಕೈದಿಗಳು ಪ್ರಥಮ, ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
10ನೇ ತರಗತಿಯಲ್ಲಿ ಜಿತೇಂದ್ರ ಎಂಬ ಕೈದಿ ಶೇ.64.83 ಅಂಕ ಗಳಿಸಿದ್ದರೆ, ಅರ್ಜುನ್ ಮತ್ತು ಶೀಲೇಶ್ ಕ್ರಮವಾಗಿ ಶೇ.63.16 ಮತ್ತು ಶೇ.62.83 ಅಂಕ ಗಳಿಸಿ ಪ್ರಥಮ ಶ್ರೇಣಿ ಪಡೆದಿದ್ದಾರೆ. 12 ನೇ ತರಗತಿಯಲ್ಲಿ ಶಿಶುಪಾಲ್ ಸಿಂಗ್, ಹರಿಸಿಂಗ್ ಮತ್ತು ಜಿತೇಂದ್ರ ಎಂಬ ಕೈದಿ ದ್ವಿತೀಯ ಶ್ರೇಣಿಯಲ್ಲಿ ಪಾಸಾದ ಕೈದಿಗಳು.
ಓದಿಗಾಗಿ ಗ್ರಂಥಾಲಯ ಸೌಲಭ್ಯ:ಇದು ನಮಗೆ ಮತ್ತು ಜೈಲಲ್ಲಿರುವ ಕೈದಿಗಳಿಗೆ ಸಂತೋಷದ ಕ್ಷಣವಾಗಿದೆ. ಕಾರಣ ಕೈದಿಗಳ ದೃಢ ನಿರ್ಧಾರದಿಂದ ಜೈಲಿನ ಸರಳುಗಳ ಹಿಂದೆಯೇ ಕುಳಿತು ಶಿಕ್ಷಣ ಪಡೆದು ಪರೀಕ್ಷೆಯಲ್ಲಿ ಈಗ ಉತ್ತೀರ್ಣರಾಗಿದ್ದಾರೆ. ಇದು ಇತರ ಕೈದಿಗಳಿಗೂ ಪ್ರೇರಣೆ ನೀಡುತ್ತದೆ. ಅವರು ಜೈಲಿನಿಂದ ಬಿಡುಗಡೆಯಾದ ಬಳಿಕ ತಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಲು ಇದು ಸಹಕಾರಿಯಾಗಲಿದೆ ಎಂದು ಜೈಲಿನ ಅಧಿಕಾರಿ ವಿ.ಕೆ.ಸಿಂಗ್ ಹೇಳಿದ್ದಾರೆ.