ಪುಣೆ:ಇಲ್ಲಿಯನಗರ ಕಲ್ಯಾಣ್ ಹೆದ್ದಾರಿಯ ದಿಂಗೋರ್ ಪ್ರದೇಶದ ಅಂಜಿರಾಚಿ ಬಾಗ್‌ನಲ್ಲಿ ತ್ರಿವಳಿ ಅಪಘಾತ ಸಂಭವಿಸಿ 8 ಜನರು ಸಾವನ್ನಪ್ಪಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಈ ಅಪಘಾತದಲ್ಲಿ ತರಕಾರಿ ಸಾಗಿಸುತ್ತಿದ್ದ ಪಿಕಪ್ ವಾಹನ ನಿಯಂತ್ರಣ ತಪ್ಪಿ ರಿಕ್ಷಾ ಮತ್ತು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಐವರು ಪುರುಷರು, ಒಬ್ಬ ಮಹಿಳೆ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅಪಘಾತದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಅಪಘಾತದಲ್ಲಿ ಎಂಟು ಜನ ಮೃತಪಟ್ಟಿದ್ದು ಈ ಪೈಕಿ ಆರು ಜನರ ಗುರುತು ಪತ್ತೆಹಚ್ಚಲಾಗಿದೆ. ಗಣೇಶ್ ಮಸ್ಕರೆ (30), ಕೋಮಲ್ ಮಸ್ಕರೆ (25), ಹರ್ಷದ್ ಮಸ್ಕರೆ (4), ಕಾವ್ಯ ಮಸ್ಕರೆ(6) ಅಮೋಲ್ ಮುಕುಂದ ತೋಖೆ, ನರೇಶ್ ನಾಮದೇವ್ ದಿವ್ತೆ (66) ಮೃತರು.
ಒಂದೇ ಕುಟುಂಬದ ನಾಲ್ವರ ಸಾವು:ಅಪಘಾತದಲ್ಲಿ ಮೃತ ಪಟ್ಟ 8 ಜನರ ಪೈಕಿ ಗಣೇಶ್ ಮಸ್ಕರೆ, ಕೋಮಲ್ ಮಸ್ಕರೆ, ಹರ್ಷದ್ ಮಸ್ಕರೆ, ಕಾವ್ಯ ಮಸ್ಕರೆ ಒಂದೇ ಕಟುಂಬದವರು ಎಂದು ವರದಿಯಾಗಿದೆ. ಈ ಕುಟುಂಬವು ತರಕಾರಿ ವ್ಯಾಪಾರ ಮಾಡುತ್ತಿತ್ತು. ಇನ್ನುಳಿದಂತೆ ಇಬ್ಬರ ಗುರುತು ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಎಂಟು ಜನರ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಓಟೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ಕುರಿತು ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.
ಅಪಘಾತ ಸಂಭವಿಸಿದ್ದು ಹೇಗೆ?:ತರಕಾರಿಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನ ಓಟೂರ್ ಕಡೆಯಿಂದ ಕಲ್ಯಾಣ್ ಕಡೆಗೆ ತೆರಳುತಿತ್ತು. ಇದೇ ವೇಳೆ ಕಲ್ಯಾಣ್ ಕಡೆಯಿಂದ ಓಟೂರ್ಗೆ ಕಡೆಗೆ ಆಟೋ ಬರುತ್ತಿತ್ತು. ಡಿಂಗೋರ್ ಮತ್ತು ಪಿಂಪಲಗಾಂವ್ ಜೋಗ ಗ್ರಾಮಗಳ ಗಡಿಯಲ್ಲಿರುವ ನಗರ ಕಲ್ಯಾಣ್ ಹೆದ್ದಾರಿ ಬಳಿಯ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ಪಿಕಪ್ ವಾಹನ, ಆಟೋಗೆ ಡಿಕ್ಕಿ ಹೊಡೆದು ಬಳಿಕ ಸ್ಕಿಡ್ ಆಗಿ ಕಲ್ಯಾಣ್ ಕಡೆಯಿಂದ ಬರುತ್ತಿದ್ದ ಲಾರಿಗೂ ಡಿಕ್ಕಿ ಹೊಡೆದಿದೆ. ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತ್ಯೇಕ ಅಪಘಾತ, ಓವರ್ ಟೇಕ್ ಮಾಡುವಾಗ ಕಾರಿಗೆ ಟ್ರಕ್ ಡಿಕ್ಕಿ: ನಾಲ್ವರ ಸಾವು
ಓವರ್ ಟೇಕ್ ಮಾಡುವ ವೇಳೆ ಕಾರಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಗಮನೇರ್ ತಾಲೂಕಿನ ಪುಣೆ-ನಾಸಿಕ್ ಹೆದ್ದಾರಿಯ ಚಂದನಪುರಿ ಗ್ರಾಮದ ಬಳಿ ಭಾನುವಾರ ರಾತ್ರಿ ನಡೆದಿದೆ. ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. ಮಹಿಳೆಯೊಬ್ಬರು ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ನಂತರ ಚಂದನಪುರಿ ಗ್ರಾಮಸ್ಥರು ಕೂಡಲೇ ಅಪಘಾತ ಸ್ಥಳಕ್ಕೆ ಧಾವಿಸಿ ಗಾಯಾಳುಗಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಓಜಸ್ವಿ ಧರಂಕರ್ (2), ಆಶಾ ಸುನೀಲ್ ಧರಣಕರ್ (42), ಸುನಿಲ್ ಧರಣಕರ್ (65) ಮತ್ತು ಅಭಯ್ ಸುರೇಶ್ ವಿಸಾಲ್ (48) ಮೃತರು. ಅಸ್ಮಿತಾ ಅಭಯ್ ವಿಸಲ್ ಗಾಯಗೊಂಡಿದ್ದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ನೀರಿಗೆ ಬಿದ್ದ ಮಗು ರಕ್ಷಿಸಲು ಹೋದ ಒಂದೇ ಕುಟುಂಬದ ಐವರು ಸಾವು: ಎಲ್ಲರ ಮೃತದೇಹ ಪತ್ತೆ