ಸಿಕರ್ (ರಾಜಸ್ಥಾನ): ರಾಜಸ್ಥಾನದ ಸಿಕರ್ ಜಿಲ್ಲೆಯ ಖಂಡೇಲಾ ಬಳಿ ವರ್ಷದ ಮೊದಲ ದಿನವೇ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಮೃತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಖಂಡೇಲಾ-ಪಲ್ಸಾನಾ ರಸ್ತೆಯಲ್ಲಿ ಪಿಕಪ್ ವಾಹನವು ಮೊದಲು ಬೈಕ್‌ಗೆ ಡಿಕ್ಕಿ ಹೊಡೆದು, ಬಳಿಕ ಎದುರಿನಿಂದ ಬರುತ್ತಿದ್ದ ಬೋರ್‌ವೆಲ್ ಲಾರಿಗೆ ಗುದ್ದಿತ್ತು.
ಮೃತದೇಹಗಳನ್ನು ಖಂಡೇಲಾ ಮತ್ತು ಪಲ್ಸಾನಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅಪಘಾತದಲ್ಲಿ ಮೃತಪಟ್ಟವರು ರಾಜಸ್ಥಾನದ ಸಮೋದ್ ಪ್ರದೇಶದ ನಿವಾಸಿಗಳಾಗಿದ್ದಾರೆ. ಹೊಸ ವರ್ಷದಂದು ಜನರು ಪಿಕಪ್ ವಾಹನದಲ್ಲಿ ಸಾವರಖಂಡೇಲಾ ದೇವಸ್ಥಾನಕ್ಕೆ ಭೇಟಿ ನೀಡಲು ಬಂದಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಖಂಡೇಲಾ ಪೊಲೀಸ್ ಠಾಣೆ ಎಸ್‌ಹೆಚ್‌ಒ ಸೋಹನ್‌ಲಾಲ್ ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಯೊಬ್ಬರು ಹೇಳುವಂತೆ, ಖಂಡೇಲಾ ಕಡೆಯಿಂದ ಬೈಕ್ ಬರುತ್ತಿತ್ತು. ಇದೇ ವೇಳೆ ಎದುರಿನಿಂದ ಬಂದ ಪಿಕಪ್ ವಾಹನ ಬೈಕ್‌ಗೆ ಡಿಕ್ಕಿಯಾಗಿದೆ. ನಂತರ ಎರಡೂ ವಾಹನಗಳು ಬೋರ್‌ವೆಲ್ ವಾಹನಕ್ಕೆ ಡಿಕ್ಕಿ ಹೊಡೆದಿವೆ. ಘಟನೆಯಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಪಿಕಪ್‌ನಲ್ಲಿದ್ದವರಾಗಿದ್ದಾರೆ.