ನವದೆಹಲಿ:ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಅನೇಕ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯು ಮೇ 26ಕ್ಕೆ ಆರು ತಿಂಗಳು ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕರಾಳ ದಿನ ಆಚರಣೆ ಮಾಡುವ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಸಂಯುಕ್ತ ಕಿಸಾನ್ ಮೋರ್ಚಾ ಈ ಪ್ರತಿಭಟನೆಗೆ ಕರೆ ನೀಡಿದ್ದು, ಇದೀಗ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎಸ್ಪಿ, ಎನ್ಸಿಪಿ, ಡಿಎಂಕೆ ಸೇರಿ ಎಡ ಪಕ್ಷಗಳಾದ ಜೆಡಿಎಸ್, ಜೆಕೆಪಿಎಲ್, ಆರ್ಜೆಡಿ, ಸಿಪಿಐ ಸೇರಿದಂತೆ 12 ಪಕ್ಷಗಳು ಬೆಂಬಲ ನೀಡಿವೆ. ವಿಶೇಷವೆಂದರೆ ಈ ಪ್ರತಿಭಟನೆಯಲ್ಲಿ ವಿವಿಧ 40 ರೈತ ಸಂಘಟನೆ ಭಾಗಿಯಾಗಲಿವೆ.
ಎಲ್ಲ ಪಕ್ಷಗಳು ಸೇರಿ ಜಂಟಿ ಹೇಳಿಕೆ ರಿಲೀಸ್ ಮಾಡಿದ್ದು, ಮೇ. 26ರಂದು ನಡೆಸಲು ಉದ್ದೇಶಿಸಲಾಗಿರುವ ರೈತ ಪ್ರತಿಭಟನೆಗೆ ನಾವು ಸಾಥ್ ನೀಡಲಿದ್ದೇವೆ ಎಂದು ತಿಳಿಸಿವೆ. ಪ್ರತಿಭಟನೆ ಶಾಂತಿಯುತವಾಗಿರಲಿದೆ ಎಂದಿವೆ. ಸೋನಿಯಾ ಗಾಂಧಿ (ಕಾಂಗ್ರೆಸ್), ಹೆಚ್ಡಿ ದೇವೇಗೌಡ (ಜೆಡಿಎಸ್), ಶರದ್ ಪವಾರ್ (ಎನ್ಸಿಪಿ), ಮಮತಾ ಬ್ಯಾನರ್ಜಿ (ತೃಣಮೂಲ ಕಾಂಗ್ರೆಸ್), ಉದ್ಧವ್ ಠಾಕ್ರೆ (ಶಿವಸೇನೆ), ಎಂ.ಕೆ ಸ್ಟಾಲಿನ್ (ಡಿಎಂಕೆ), ಹೇಮಂತ್ ಸೊರೆನ್ (ಜೆಎಂಎಂ), ಫಾರೂಕ್ ಅಬ್ದುಲ್ಲಾ (ಜೆಕೆಪಿಎ), ಅಖಿಲೇಶ್ ಯಾದವ್ (ಸಮಾಜವಾದಿ ಪಕ್ಷ), ತೇಜಸ್ವಿ ಯಾದವ್ (ಆರ್ಜೆಡಿ), ಡಿ. ರಾಜಾ (ಸಿಪಿಎಂ) ಹಾಗೂ ಸೀತಾರಾಮ್ ಯಚೂರಿ (ಸಿಪಿಎ-ಐ) ಜಂಟಿಯಾಗಿ ಹೇಳಿಕೆ ರಿಲೀಸ್ ಮಾಡಿವೆ.
ಕೇಂದ್ರ ಜಾರಿಗೊಳಿಸಿರುವ ರೈತ ವಿರೋಧಿ ಮೂರು ಕೃಷಿ ಕಾನೂನು ತಕ್ಷಣವೇ ಹಿಂಪಡೆದುಕೊಳ್ಳುವಂತೆ ಆಗ್ರಹಿಸಿದ್ದು, ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಅರ್ಹತೆ ಜೊತೆಗೆ ಸ್ವಾಮಿನಾಥನ್ ಆಯೋಗದ ಶಿಫಾರಸು ಅನುಷ್ಠಾನಕ್ಕೆ ಒತ್ತಾಯ ಮಾಡಿವೆ. ಜತೆಗೆ ಮೇ 12 ರಂದು ಪ್ರಧಾನಿ ಮೋದಿಗೆ ಜಂಟಿಯಾಗಿ ಪತ್ರ ಬರೆದಿರುವುದಾಗಿ ತಿಳಿಸಿವೆ. ಇದರಲ್ಲಿ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕೃಷಿ ಕಾಯ್ದೆ ಹಿಂಪಡೆದುಕೊಂಡು ಆಹಾರ ಬೆಳೆ ಬೆಳೆಯುವುದಕ್ಕೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದಾಗಿ ಹೇಳಿವೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ವಿವಿಧ ಗಡಿ ಭಾಗದಲ್ಲಿ ರೈತರು ಪ್ರತಿಭಟನೆ ಮುಂದುವರೆಸಿದ್ದು, ಮೇ 26ರಂದು ಕರಾಳ ದಿನ ಆಚರಣೆ ಮಾಡಲು ನಿರ್ಧರಿಸಿವೆ. ಇನ್ನು ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಮೇ 26ಕ್ಕೆ ಏಳು ವರ್ಷ ಪೂರೈಕೆ ಆಗಲಿದೆ.