ತಿರುನೆಲ್ವೇಲಿ (ತಮಿಳುನಾಡು) : ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಸರ್ಕಾರಿ ವೀಕ್ಷಣಾ ಕೇಂದ್ರದಿಂದ ಭಾನುವಾರ ಪರಾರಿಯಾಗಿದ್ದ ಹನ್ನೆರಡು ಬಾಲಾಪರಾಧಿಗಳ ಪೈಕಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೂತುಕುಡಿ ಜಿಲ್ಲೆಯ ಶ್ರೀವೈಕುಂಡಂ ಪ್ರದೇಶದ ಬಳಿ ಈ ಇಬ್ಬರು ಬಾಲಾಪರಾಧಿಗಳನ್ನು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ನಾಪತ್ತೆಯಾಗಿರುವ 10 ಮಂದಿ ಬಾಲಾಪರಾಧಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಬಾಲಾಪರಾಧಿಗಳ ಪಳಯಂಕೊಟ್ಟೈ ವೀಕ್ಷಣಾ ಗೃಹದಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಬಾಲಾಪರಾಧಿಗಳು ಜೈಲು ವಾರ್ಡನ್ ಮೇಲೆ ಹಲ್ಲೆ ನಡೆಸಿ ವೀಕ್ಷಣಾ ಗೃಹದಿಂದ ಪರಾರಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಿರುನಲ್ವೇಲಿ, ಕನ್ಯಾಕುಮಾರಿ ಮತ್ತು ತೂತುಕುಡಿ ಜಿಲ್ಲೆಗಳ 20 ಬಾಲಾಪರಾಧಿಗಳು ವೀಕ್ಷಣಾ ಕೇಂದ್ರದಲ್ಲಿದ್ದರು
ಇದನ್ನೂ ಓದಿ :ಕೋಮುಗಲಭೆಗೆ ಕಾರಣವಾದ ಮಕ್ಕಳ ಜಗಳ.. ಛತ್ತೀಸ್ಗಢ ಬಂದ್ಗೆ ಕರೆ ನೀಡಿದ ಸಂಘಟನೆಗಳು
ಪರಾರಿಯಾದ ಬಾಲಕರನ್ನು ಹಿಡಿಯಲು ಪೊಲೀಸರಿಂದ ಶೋಧ: ಘಟನೆಯ ನಂತರ ಕಾರಾಗೃಹದ ವಾರ್ಡನ್ ಪೆರುಮಾಳ್ಪುರಂ ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ನಂತರ ಪೊಲೀಸರ ತಂಡವು ಪರಿಸ್ಥಿತಿ ಅವಲೋಕಿಸಲು ಸ್ಥಳಕ್ಕೆ ಧಾವಿಸಿದೆ. ಪರಾರಿಯಾಗಿರುವ ಬಾಲಾಪರಾಧಿಗಳನ್ನು ಹಿಡಿಯಲು ಪೊಲೀಸರು ಭಾರಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ತಿರುನೆಲ್ವೇಲಿ ಬಸ್ ನಿಲ್ದಾಣ, ಪಳಯಂಕೊಟ್ಟೈ ಬಸ್ ನಿಲ್ದಾಣ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಅಲ್ಲದೇ ಹತ್ತಿರದ ಸ್ಥಳಗಳಲ್ಲಿನ ಸಿಸಿಟಿವಿ ದೃಶ್ಯಗಳನ್ನು ಸಹ ಪರಿಶೀಲನೆ ನಡೆಸಲಾಗುತ್ತಿದೆ.