ಜೈಪುರ್ (ರಾಜಸ್ಥಾನ): ರಾಜ್ಯದ ಭಿಲ್ವಾರಾದಲ್ಲಿ ದೈಹಿಕ ವಿಕಲಚೇತನ ಸ್ಟೇಷನರಿ ಅಂಗಡಿ ಮಾಲೀಕರೊಬ್ಬರಿಗೆ ಅವರು ನಡೆಸಿದ 12 ಕೋಟಿ ರೂಪಾಯಿ ವಹಿವಾಟಿನ ಬಗ್ಗೆ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಆದರೆ ಇಷ್ಟೊಂದು ಮೊತ್ತದ ವಹಿವಾಟನ್ನು ತಾವು ಮಾಡಿಲ್ಲ ಎಂದು ಅಂಗಡಿ ಮಾಲೀಕ ಹೇಳಿದ್ದಾರೆ. ಸಂಜಯ್ ಕಾಲೋನಿ ನಿವಾಸಿ ಕಿಶನ್ ಗೋಪಾಲ್ ಚಪರ್ವಾಲ್ ಎಂಬುವರು ಈ ಬಗ್ಗೆ ಸುಭಾಷ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಯಾರೋ ತಮ್ಮ ಹಣಕಾಸು ಡೇಟಾವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಚಾಪರ್ವಾಲ್ ಅವರು ಸ್ಟೇಷನರಿ ಅಂಗಡಿಯನ್ನು ನಡೆಸುತ್ತಿದ್ದಾರೆ ಮತ್ತು ಮದುವೆಗಳಲ್ಲಿ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 28 ರಂದು ಅಂಚೆ ಮೂಲಕ ಬಂದಿರುವ ಆದಾಯ ತೆರಿಗೆ ನೋಟಿಸ್ ತನಗೆ ಮತ್ತು ಅವರ ಕುಟುಂಬವನ್ನು ಆಘಾತಗೊಳಿಸಿದೆ ಎಂದು ಅವರು ಹೇಳಿದರು. ಚಾಪರ್ವಾಲ್ ಅವರು ಚಾರ್ಟರ್ಡ್ ಅಕೌಂಟೆಂಟ್ ಅನ್ನು ಸಂಪರ್ಕಿಸಿದಾಗ, ಮುಂಬೈ ಮತ್ತು ಸೂರತ್‌ನಲ್ಲಿ ಎರಡು ಡೈಮಂಡ್ ಶೆಲ್ ಕಂಪನಿಗಳಿಗೆ ಹಲವಾರು ಕೋಟಿಗಳಷ್ಟು ನಕಲಿ ವಹಿವಾಟು ನಡೆಸಲು ತಮ್ಮ ಪ್ಯಾನ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸಾಲ ಮಾಡಿ ಅಂಗಡಿ ಇಟ್ಟಿದ್ದೇನೆ, ಕಂತು ಕಟ್ಟಲು ಸಾಧ್ಯವಾಗುತ್ತಿಲ್ಲ. ತಿಂಗಳಿಗೆ 8 ರಿಂದ 10 ಸಾವಿರ ಆದಾಯ ಗಳಿಸುತ್ತೇನೆ. ಈ ಬೋಗಸ್ ಕಂಪನಿಗಳಿಗೂ ನನಗೂ ಸಂಬಂಧವಿಲ್ಲ, ಕೆಲ ವಂಚಕರು ನನಗೆ ಮೋಸ ಮಾಡಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. 12.23 ಕೋಟಿ ವ್ಯವಹಾರಕ್ಕೆ ಸಂಬಂಧಿಸಿದ ವಿವರಗಳನ್ನು ಸಲ್ಲಿಸಲು ಐಟಿ ಇಲಾಖೆ ನನಗೆ ನೋಟಿಸ್ ಕಳುಹಿಸಿದೆ. ಈ ವಿಷಯದಲ್ಲಿ ಮರುಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.