ನವದೆಹಲಿ:ದೇಶದಲ್ಲಿ ಈಗಾಗಲೇ 125 ಕೋಟಿ ಕೋವಿಡ್ ಡೋಸ್ ನೀಡಲಾಗಿದೆ ಎಂಬ ಮಾಹಿತಿಯನ್ನ ಕೇಂದ್ರ ಆರೋಗ್ಯ ಇಲಾಖೆ ನೀಡಿದೆ. ಆದರೆ, ಇದರಲ್ಲಿ ಮೊದಲ ಡೋಸ್ ಪಡೆದುಕೊಂಡಿರುವ 12.5 ಕೋಟಿ ಜನರು ಎರಡನೇ ಡೋಸ್ ವ್ಯಾಕ್ಸಿನ್ ಪಡೆದುಕೊಳ್ಳಲು ಹಿಂದೇಟು ಹಾಕಿದ್ದಾರೆಂಬ ಮಾಹಿತಿ ನೀಡಿದೆ.
ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿರುವ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಪ್ರತಿಕ್ರಿಯೆ ನೀಡಿದ್ದು, ದೇಶದಲ್ಲಿ ಕೋವಿಡ್-19 ಲಸಿಕೆಯ ಎರಡನೇ ಡೋಸ್ ಪಡೆದುಕೊಳ್ಳುವುದರಿಂದ ಹಿಂದೆ ಸರಿದಿರುವವರ ಸಂಖ್ಯೆ 12.5 ಕೋಟಿ ಆಗಿದೆ ಎಂದರು.
ನವೆಂಬರ್ 30ರವರೆಗಿನ ಮಾಹಿತಿ ಪ್ರಕಾರ ನಿಗದಿತ ಅವಧಿಯೊಳಗೆ ಇವರೆಲ್ಲರೂ ವ್ಯಾಕ್ಸಿನ್ ಪಡೆದುಕೊಳ್ಳಬೇಕಾಗಿತ್ತು. ಆದರೆ, ಅವರು ಡೋಸ್ ಪಡೆದುಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದರು. ಇಂತಹವರನ್ನ ಗುರುತಿಸಿ ವ್ಯಾಕ್ಸಿನ್ ನೀಡಲು ಕೇಂದ್ರ ಸರ್ಕಾರ ನವೆಂಬರ್ 3ರಿಂದಲೇ ಹರ್ ಘರ್ ದಸ್ತಕ್ ಅಭಿಯಾನ ಆರಂಭ ಮಾಡಿದ್ದು, ಇದರಲ್ಲಿ ಮೊದಲ ಹಾಗೂ ಎರಡನೇ ಡೋಸ್ ಪಡೆದುಕೊಳ್ಳದ ಫಲಾನುಭವಿಗಳಿಗೆ ಲಸಿಕೆ ನೀಡಲಾಗುತ್ತಿದೆ ಎಂದರು.
ಇದನ್ನೂ ಓದಿರಿ:ದೆಹಲಿ ಆಸ್ಪತ್ರೆಯಲ್ಲೂ 12 ಶಂಕಿತ Omicron ಪ್ರಕರಣ ಪತ್ತೆ?
ಕೋವಿಡ್ ವ್ಯಾಕ್ಸಿನೇಷನ್ ವ್ಯಾಪ್ತಿಗಾಗಿ ಜಿಲ್ಲಾವರು ಯೋಜನೆ ರೂಪಿಸಲಾಗಿದ್ದು, ಅಧಿಕಾರಿಗಳು ಎಲ್ಲರಿಗೂ ವ್ಯಾಕ್ಸಿನ್ ತಲುಪಿಸುವ ಕ್ರಮ ಕೈಗೊಂಡಿದ್ದಾರೆ ಎಂದರು. ಉತ್ತರ ಪ್ರದೇಶದಲ್ಲಿ ಎರಡನೇ ಡೋಸ್ನಿಂದ 2,11,29,397 ಜನರು ತಪ್ಪಿಸಿಕೊಂಡಿದ್ದು, ರಾಜಸ್ಥಾನದಿಂದ 1,23,32,133 ಜನರು, ಮಹಾರಾಷ್ಟ್ರದಿಂದ 1,00,31,101, ಬಿಹಾರ 93,60,859 ಮತ್ತು ತಮಿಳುನಾಡಿನಿಂದ 80,50,574 ಫಲಾನುಭವಿಗಳು ಹೊರಗುಳಿದಿದ್ದಾರೆ ಎಂದು ತಿಳಿಸಿದರು.