ನವದೆಹಲಿ: ಗಂಗಾ ಹಾಗೂ ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 13ರಂದು ಉದ್ಘಾಟನೆ ಮಾಡಲಿದ್ದಾರೆ. ಅದಕ್ಕಾಗಿ ಎರಡು ದಿನಗಳ ಕಾಲ ನಮೋ ತಮ್ಮ ಸಂಸದೀಯ ಕ್ಷೇತ್ರದಲ್ಲಿ ಉಳಿದುಕೊಳ್ಳಲಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಈ ಪ್ರವಾಸ ಮಹತ್ವ ಪಡೆದುಕೊಂಡಿದ್ದು, ಇದೇ ಕಾರಣಕ್ಕಾಗಿ 'ದಿವ್ಯ ಕಾಶಿ ಭವ್ಯ ಕಾಶಿ' ಕಾರ್ಯಕ್ರಮ ಆಯೋಜನೆ ಮಾಡಲು ಯುಪಿ ಸರ್ಕಾರ ಮುಂದಾಗಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮೆಗಾ ಕಾರ್ಯಕ್ರಮ ನಡೆಸಲು ನಿರ್ಧರಿಸಿದೆ. ಇದೇ ಕಾರಣಕ್ಕಾಗಿ ದೇಶದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿರುವ 12 ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ.
ಡಿಸೆಂಬರ್ 14ರಂದು ನಡೆಯಲಿರುವ 'ಉತ್ತಮ ಆಡಳಿತ' ವಿಷಯದ ವಿಚಾರ ಸಂಕಿರಣದಲ್ಲಿ ಎಲ್ಲ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಭಾಗಿಯಾಗಲಿದ್ದಾರೆ. ಈ ವೇಳೆ, ಕೋವಿಡ್ ನಿರ್ವಹಣೆ ಹಾಗೂ ವ್ಯಾಕ್ಸಿನೇಷನ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಲಹೆ - ಸೂಚನೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ಆರಂಭದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ನೀತಿ ಸಂಹಿತೆ ಜಾರಿಗೊಳ್ಳಲಿದೆ. ಅದಕ್ಕೂ ಮುಂಚಿತವಾಗಿ ಬಿಜೆಪಿ ಈ ಮೆಗಾ ಕಾರ್ಯಕ್ರಮ ಆಯೋಜನೆ ಮಾಡಲು ಮುಂದಾಗಿದೆ.