ನವದೆಹಲಿ : ಫೆಬ್ರವರಿ 18 ರಂದು ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ತರಲಾಗುವುದು ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಗುರುವಾರ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ 'ಚೀತಾ ಮರು ಪರಿಚಯ' ಅಡಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷದ ಸೆಪ್ಟೆಂಬರ್ 17 ರಂದು, ತಮ್ಮ 72 ನೇ ಹುಟ್ಟುಹಬ್ಬದಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದ ಕ್ವಾರಂಟೈನ್ ಆವರಣದಲ್ಲಿ ನಮೀಬಿಯಾದಿಂದ ತರಿಸಲಾದ ಐದು ಹೆಣ್ಣು ಮತ್ತು ಮೂರು ಗಂಡು ಚೀತಾಗಳನ್ನು ಬಿಡುಗಡೆ ಮಾಡಿದ್ದರು.
ಪ್ರಸ್ತುತ ಕುನೊದಲ್ಲಿನ ಎಂಟು ಚೀತಾಗಳು ಪ್ರತಿ ಮೂರು ನಾಲ್ಕು ದಿನಗಳಿಗೊಮ್ಮೆ ಬೇಟೆಯಾಡಿ ಪ್ರಾಣಿಯೊಂದನ್ನು ಕೊಲ್ಲುತ್ತಿವೆ ಮತ್ತು ಉತ್ತಮ ಆರೋಗ್ಯ ಹೊಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ರಿಯೇಟಿನೈನ್ ಮಟ್ಟ ಹೆಚ್ಚಾದ ಕಾರಣ ಚಿರತೆಯೊಂದು ಅಸ್ವಸ್ಥವಾಗಿತ್ತು. ಆದರೆ, ಚಿಕಿತ್ಸೆಯ ನಂತರ ಈ ಹೆಣ್ಣು ಚೀತಾ ಚೇತರಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಆಫ್ರಿಕಾದಿಂದ ಭಾರತಕ್ಕೆ ಚೀತಾ ಸಾಗಿಸಲು ಜನವರಿಯಲ್ಲಿ ಒಪ್ಪಂದ ಮಾಡಿಕೊಂಡಿದ್ದವು.
ಸದ್ಯ ಪ್ರಪಂಚದಲ್ಲಿ ಜೀವಂತವಾಗಿರುವ 7,000 ಚೀತಾಗಳ ಪೈಕಿ ಹೆಚ್ಚಿನವು ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಬೋಟ್ಸ್ವಾನಾದಲ್ಲಿ ವಾಸಿಸುತ್ತವೆ. ನಮೀಬಿಯಾವು ವಿಶ್ವದಲ್ಲಿಯೇ ಅತಿ ಹೆಚ್ಚು ಚೀತಾಗಳನ್ನು ಹೊಂದಿದೆ. ಚೀತಾ ಭಾರತದಲ್ಲಿ ಸಂಪೂರ್ಣವಾಗಿ ನಾಶವಾದ ಏಕೈಕ ದೊಡ್ಡ ಮಾಂಸಾಹಾರಿ ಪ್ರಬೇಧವಾಗಿದೆ. ಮುಖ್ಯವಾಗಿ ಅತಿಯಾದ ಬೇಟೆ ಮತ್ತು ಆವಾಸಸ್ಥಾನದ ನಷ್ಟದಿಂದಾಗಿ ಚೀತಾಗಳ ಸಂತತಿ ನಾಶವಾಯಿತು. ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯ ಸಾಲ್ ಅರಣ್ಯದಲ್ಲಿ 1948 ರಲ್ಲಿ ಕೊನೆಯ ಚೀತಾ ಸಾವನ್ನಪ್ಪಿತ್ತು.