ಗ್ವಾಲಿಯರ್, ಮಧ್ಯಪ್ರದೇಶ:ಇಂದು ದಕ್ಷಿಣ ಆಫ್ರಿಕಾದಿಂದ 12 ಚೀತಾಗಳು ಭಾರತಕ್ಕೆ ಬಂದಿಳಿದಿವೆ. ಈ ಬಗ್ಗೆ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಗುರುವಾರ ಮಾಹಿತಿ ನೀಡಿದ್ದರು. 7 ಗಂಡು ಮತ್ತು 5 ಹೆಣ್ಣು ಚಿರತೆಗಳು ಸೇರಿ ಇಂದು ಫಿಂಡಾ ಮತ್ತು ರೂಬರ್ಗ್ ರಿಸರ್ವ್‌ನಿಂದ ಭಾರತಕ್ಕೆ ಬಂದಿವೆ.
ಚೀತಾಗಳು ಭಾರತೀಯ ವಾಯುಪಡೆಯ C-17 ಗ್ಲೋಬ್‌ಮಾಸ್ಟರ್ ಕಾರ್ಗೋ ವಿಮಾನದಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿವೆ. ಅಲ್ಲಿಂದ ಅವುಗಳನ್ನು ರಾಜ್ಯದ ಹೊಸ ಮನೆಯಾದ 'ದಿ ಕುನೊ ನ್ಯಾಷನಲ್ ಪಾರ್ಕ್'ಗೆ ಕರೆದೊಯ್ಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚೀತಾಗಳ ಆಗಮನದಿಂದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳ ಸಂಖ್ಯೆಯನ್ನು ಹೆಚ್ಚಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಇಂದು ಚಿರತೆಗಳ ಸಂಖ್ಯೆ ಹೆಚ್ಚಾಗಲಿದೆ. ನಾನು ಪ್ರಧಾನಿ ಮೋದಿಯವರಿಗೆ ನನ್ನ ಹೃದಯದಾಳದಿಂದ ಧನ್ಯವಾದ ಹೇಳುತ್ತೇನೆ. ಇದು ಅವರ ದೂರದೃಷ್ಟಿಯಾಗಿದೆ. 12 ಚಿರತೆಗಳನ್ನು ಕುನೊಗೆ ಪುನರ್ವಸತಿ ಮಾಡಲಾಗುವುದು ಮತ್ತು ಒಟ್ಟು ಸಂಖ್ಯೆ 20 ಆಗಲಿದೆ ಎಂದು ಸಿಎಂ ಚೌಹಾಣ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ 'ಚೀತಾ ಮರು ಪರಿಚಯ' ಅಡಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷದ ಸೆಪ್ಟೆಂಬರ್ 17 ರಂದು, ತಮ್ಮ 72 ನೇ ಹುಟ್ಟುಹಬ್ಬದಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದ ಕ್ವಾರಂಟೈನ್ ಆವರಣದಲ್ಲಿ ನಮೀಬಿಯಾದಿಂದ ತರಿಸಲಾದ ಐದು ಹೆಣ್ಣು ಮತ್ತು ಮೂರು ಗಂಡು ಚೀತಾಗಳನ್ನು ಬಿಡುಗಡೆ ಮಾಡಿದ್ದರು.
ಪ್ರಸ್ತುತ ಕುನೊದಲ್ಲಿನ ಎಂಟು ಚೀತಾಗಳು ಪ್ರತಿ ಮೂರು ನಾಲ್ಕು ದಿನಗಳಿಗೊಮ್ಮೆ ಬೇಟೆಯಾಡಿ ಪ್ರಾಣಿಯೊಂದನ್ನು ಕೊಲ್ಲುತ್ತಿವೆ ಮತ್ತು ಉತ್ತಮ ಆರೋಗ್ಯ ಹೊಂದಿವೆ. ಕ್ರಿಯೇಟಿನೈನ್ ಮಟ್ಟ ಹೆಚ್ಚಾದ ಕಾರಣ ಚಿರತೆಯೊಂದು ಅಸ್ವಸ್ಥವಾಗಿತ್ತು. ಆದರೆ, ಚಿಕಿತ್ಸೆಯ ನಂತರ ಈ ಹೆಣ್ಣು ಚೀತಾ ಚೇತರಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಆಫ್ರಿಕಾದಿಂದ ಭಾರತಕ್ಕೆ ಚೀತಾ ಸಾಗಿಸಲು ಜನವರಿಯಲ್ಲಿ ಒಪ್ಪಂದ ಮಾಡಿಕೊಂಡಿದ್ದವು.