ಶ್ರೀನಗರ:ಈ ವರ್ಷದ ಮೇ ತಿಂಗಳಿನಲ್ಲಿ ಕಾಶ್ಮೀರ ಕಣಿವೆಯಿಂದ ಸುಮಾರು 11 ಯುವಕರು ನಾಪತ್ತೆಯಾಗಿದ್ದಾರೆ. ಈ ಯುವಕರಲ್ಲಿ ಹೆಚ್ಚಿನವರು ಓದಿದವರಾಗಿದ್ದಾರೆ. ಮಾಸ್ಟರ್ ಆಫ್ ಸೈನ್ಸ್ (MSc) ಮತ್ತು ಬ್ಯಾಚುಲರ್ ಆಫ್ ಎಜುಕೇಶನ್ (BEd) ಪದವಿ ಪಡೆದವರಾಗಿದ್ದಾರೆ ಎಂದು ಇತ್ತೀಚಿನ ವರದಿಯಿಂದ ತಿಳಿದು ಬಂದಿದೆ.
ಪುಲ್ವಾಮಾ ಜಿಲ್ಲೆಯ ದರ್ಬಗಾಮ್ ಗ್ರಾಮದ ನಜೀರ್ ಅಹಮದ್ ಭಟ್ ಅವರ ಪುತ್ರ ಫಾಜಿಲ್ ಅಹ್ಮದ್ ಭಟ್ ಮೇ.14 ರಂದು ಮನೆಯಿಂದ ಹೋದವರು ಮತ್ತೆ ವಾಪಸ್ ಬಂದಿಲ್ಲ. ಫಾಜಿಲ್ ಹತ ಉಗ್ರ ಜಾಹಿದ್ ಅಹ್ಮದ್ ಅಲಿಯಾಸ್ ಜಾಹಿದ್ ಟೈಗರ್‌ನ ಕಿರಿಯ ಸಹೋದರನಾಗಿದ್ದು, ಕೆಲವು ವರ್ಷಗಳ ಹಿಂದೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ.
ಇನ್ನು ಪುಲ್ವಾಮಾ ಜಿಲ್ಲೆಯ ಅರ್ಬಲ್ ಪ್ರದೇಶದಿಂದ ಮಾಸ್ಟರ್ ಆಫ್ ಸೈನ್ಸ್ (ಎಂಎಸ್ಸಿ) ಮತ್ತು ಬ್ಯಾಚುಲರ್ ಆಫ್ ಎಜುಕೇಶನ್ (ಬಿಇಡಿ) ಪದವಿ ಪಡೆದ ಯುವಕ ಇರ್ಫಾನ್ ಅಹ್ಮದ್ ಮಲಿಕ್ ಕಳೆದ ಆರು ದಿನಗಳಿಂದ ನಾಪತ್ತೆಯಾಗಿದ್ದಾನೆ. ಪುಲ್ವಾಮಾ ಜಿಲ್ಲೆಯ ಗೋಡುರಾ ಪ್ರದೇಶದ ಗುಲಾಮ್ ಖಾದಿರ್ ವೇಗಾ ಅವರ ಪುತ್ರ 18 ವರ್ಷದ ಜುನೈದ್ ಅಹ್ಮದ್ ವೇಗಾ ಮೇ.13 ರಿಂದ ನಾಪತ್ತೆಯಾಗಿದ್ದು, ಮನೆಗೆ ಮರಳುವಂತೆ ಕುಟುಂಬವು ಮನವಿ ಮಾಡಿದೆ.
ಈ ಹಿಂದೆಯೂ ಕಣಿವೆಯಿಂದ ಯುವಕರು ಮನೆಯಿಂದ ನಾಪತ್ತೆಯಾಗಿರುವ ಹಲವಾರು ಪ್ರಕರಣಗಳು ವರದಿಯಾಗಿದ್ದು, ಹೆಚ್ಚಿನವರು ಉಗ್ರಗಾಮಿಗಳ ಸಾಲಿಗೆ ಸೇರಿದ್ದಾರೆ. ಒಟ್ಟಾರೆ ಉಗ್ರರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದ್ದರೂ, ಸ್ಥಳೀಯ ಯುವಕರು ಉಗ್ರಗಾಮಿ ಸಂಘಟನೆಗಳಿಗೆ ಸೇರುತ್ತಿರುವ ಪ್ರವೃತ್ತಿ ಮಾತ್ರ ಒಳ್ಳೆ ಲಕ್ಷಣವಾಗಿ ಕಾಣುತ್ತಿಲ್ಲ. ಸ್ಥಳೀಯ ಯುವಕರು ಉಗ್ರಗಾಮಿತ್ವದಿಂದ ದೂರವಿರುವಂತೆ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ. ವಾಸ್ತವವಾಗಿ, ಅನೇಕ ಯುವಕರು ಉಗ್ರಗಾಮಿ ಸಂಘಟನೆಗಳಿಗೆ ಸೇರುವುದನ್ನು ಭದ್ರತಾ ಪಡೆಗಳು ತಡೆದಿವೆ.
ಇದನ್ನೂ ಓದಿ:ಚಹಾ ಬೆಲೆಗಾಗಿ ನಡೆದ ಮಾತಿನ ಚಕಮಕಿ: ಢಾಬಾದ ಮಾಲೀಕನಿಗೆ ಥಳಿಸಿದ ಯುವಕರ ಗುಂಪು
ಅಧಿಕೃತ ವರದಿಗಳ ಪ್ರಕಾರ, 2022 ರ ಮೊದಲ ಮೂರು ತಿಂಗಳಲ್ಲಿ (ಜನವರಿ - ಮಾರ್ಚ್) ಕಾಶ್ಮೀರದಲ್ಲಿ ವಿದೇಶಿ ಉಗ್ರಗಾಮಿಗಳ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ. ದಕ್ಷಿಣ ಕಾಶ್ಮೀರದಲ್ಲಿ 87, ಉತ್ತರ ಕಾಶ್ಮೀರದಲ್ಲಿ 65 ಮತ್ತು ಮಧ್ಯ ಕಾಶ್ಮೀರದಲ್ಲಿ 16 ಉಗ್ರರು ಸಕ್ರಿಯರಾಗಿದ್ದಾರೆ ಎಂದು ಅಂಕಿ- ಅಂಶಗಳು ಹೇಳುತ್ತವೆ. ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಸುಮಾರು 15 ಸ್ಥಳೀಯ ಯುವಕರು ನಾಪತ್ತೆಯಾಗಿದ್ದಾರೆ ಎಂದು ವರದಿಗಳು ಹೇಳುತ್ತವೆ.
ಮೇ 17, 2022 ರಂದು ಟಾರ್ನ್ಸ್ ಶೋಪಿಯಾನ್‌ಗೆ ಸೇರಿದ ಅಫ್ರಿನ್ ಅಲ್ತಾಫ್ ಮಲಿಕ್ ಮತ್ತು ಶಾಕಿರ್ ಅಹ್ಮದ್ ವಾಜಾ ಅವರ ಮನೆಯಿಂದ ನಾಪತ್ತೆಯಾಗಿದ್ದಾರೆ. ಈ ನಡುವೆ ಕಿಗಾಮ್ ಶೋಪಿಯಾನ್ ಪ್ರದೇಶದ ಗುಲಾಮ್ ಮುಹಮ್ಮದ್ ಚೋಪಾನ್ ಅವರ ಪುತ್ರ ಜಾಹಿದ್ ಅಹ್ಮದ್ ಚೋಪಾನ್ ಮೇ.17 ರಂದು ಮನೆಯಿಂದ ಹೊರ ಹೋದವರು ಮತ್ತೆ ಬಂದಿಲ್ಲ. ಕತ್ಪುರದ ಶೋಪಿಯಾನ್‌ನಿಂದ ಮುಝಮ್ಮಿಲ್ ವಾನಿ (15) ಮೇ. 9 ರಂದು ನಾಪತ್ತೆಯಾಗಿದ್ದಾರೆ.
ಪುಲ್ವಾಮಾ ಜಿಲ್ಲೆಯ ಮನ್ಹಗಾಮ್ ಪ್ರದೇಶದ ಅಬಿದ್ ಹುಸೇನ್ ಶಾ ಕೂಡ ಕಳೆದ ಎರಡು ವಾರಗಳಿಂದ ನಾಪತ್ತೆಯಾಗಿದ್ದು, ನಿಹಾಲ್ಪುರ ಬಾರಾಮುಲ್ಲಾದ ಇರ್ಷಾದ್ ಅಹ್ಮದ್ ಮಿರ್ ಮೇ. 9, 2022 ರಂದು ಅವರ ಮನೆಯಿಂದ ನಾಪತ್ತೆಯಾಗಿದ್ದರು. ಬುಟೋಟ್ ಪ್ರದೇಶದ ಮುಹಮ್ಮದ್ ಸಾದಿಕ್ ಮಲಿಕ್ ಮೇ.11 ರಂದು ತನ್ನ ಮನೆಯಿಂದ ನಾಪತ್ತೆಯಾಗಿದ್ದಾನೆ.
ಗುಲಾಂ ನಬಿ ಭಟ್ ಅವರ ಪುತ್ರ ತೌಸೀಫ್ ಅಹ್ಮದ್ ಮೇ. 8, 2022 ರಂದು ನಾಪತ್ತೆಯಾಗಿದ್ದು, ಮತ್ತೆ ಬಂದಿಲ್ಲ. 34 ವರ್ಷದ ಅಬ್ದುಲ್ ರಶೀದ್ ಮಗ್ರೆ ಮೇ.13 ರಂದು ನಾಪತ್ತೆಯಾಗಿದ್ದರು. ಈ ಎಲ್ಲ ಯುವಕರು ನಾಪತ್ತೆಯಾದ ಬಳಿಕ ಅವರ ಕುಟುಂಬಸ್ಥರು ಹಿಂತಿರುಗುವಂತೆ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಬಹುತೇಕ ಕುಟುಂಬಗಳು ಸಂಬಂಧಿತ ಪೊಲೀಸ್ ಠಾಣೆಗಳಲ್ಲಿ ನಾಪತ್ತೆಯಾಗಿರುವ ಬಗ್ಗೆ ದೂರುಗಳನ್ನು ಸಹ ದಾಖಲಿಸಿದ್ದಾರೆ.