ಗ್ವಾಲಿಯರ್ (ಮಧ್ಯಪ್ರದೇಶ) :ತಾಯಿ ಮತ್ತು ಮಲತಂದೆ ಸೇರಿಕೊಂಡು ಅಪ್ರಾಪ್ತೆಯನ್ನು ವಿವಾಹ ಮಾಡಿಸಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ಈ ಬಾಲಕಿಯ ಸಹೋದರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿ ಘಟನೆ ಬೆಳಕಿಗೆ ಬಂದಿದೆ. ಗ್ವಾಲಿಯರ್‌ನ ಗಿರ್‌ಗಾಂವ್ ಪ್ರದೇಶದಿಂದ ಪೊಲೀಸರು ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ಬಾಲಕಿಯ ತಾಯಿ, ಮಲತಂದೆ, ಅಳಿಯನಾಗಿರುವ ಯುವಕನನ್ನು ಮತ್ತು ಮಧ್ಯವರ್ತಿಯನ್ನು ಬಂಧಿಸಲಾಗಿದೆ.
ಅತ್ಯಾಚಾರ ಮತ್ತು ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲು: ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ ಬಳಿಕ ಮದುವೆಯಾದ ಯುವಕನ ವಿರುದ್ಧ ಅತ್ಯಾಚಾರ, ಪೋಕ್ಸೋ ಕಾಯ್ದೆ, ಬಾಲ್ಯವಿವಾಹ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬುಡಕಟ್ಟು ಕುಟುಂಬದ 11 ವರ್ಷದ ಬಾಲಕಿಯನ್ನು ತನಗಿಂತ 10 ವರ್ಷ ದೊಡ್ಡವನ ಜೊತೆ ಅಂದರೆ 21 ವರ್ಷದ ಯುವಕನ ಜತೆ ಮದುವೆ ಮಾಡಲಾಗಿತ್ತು. ಈ ವಿವಾಹವನ್ನು ಮಲತಂದೆ ಮತ್ತು ತಾಯಿ ಒಟ್ಟಿಗೆ ಸೇರಿ ಬಲವಂತದಿಂದ ವಿವಾಹ ಮಾಡಿಸಿದ್ದರು. ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಈ ಮದುವೆಯಾಗಿದೆ ಎಂದು ಸಹೋದರ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ವಿಷಯ ತಿಳಿದ ಪೊಲೀಸರು ಬಾಲ್ಯವಿವಾಹ ನಿಷೇಧ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ಹದಿಹರೆಯದ ಬಾಲಕಿಗಾಗಿ ಶೋಧ ನಡೆಸಿದಾಗ ಆರೋಪಿಯು ತನ್ನ ಜಮೀನಿನ ಕೊಠಡಿಯೊಂದರಲ್ಲಿ ಬಾಲಕಿಯನ್ನು ಕೂಡಿಟ್ಟುಕೊಂಡಿದ್ದು ತಿಳಿದು ಬಂದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಿಚಾರಣೆಗೆ ಒಳಪಡಿಸಿದ್ದು, ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ವಿಡಿಯೋ: ನೀರಿನ ರಭಸದ ನಡುವೆಯೂ ಬ್ರಿಡ್ಜ್ ಗೇಟ್ ತೆರೆಯುವ ಯತ್ನ