ಭದ್ರಾದ್ರಿ ಕೊತ್ತಗೂಡೆಂ (ತೆಲಂಗಾಣ):ಪುಸ್ತಕ ಖರೀದಿಸಲು ಪೋಷಕರು ಹಣ ನೀಡದೇ ಇದ್ದುದಕ್ಕೆ ಬೇಸರಗೊಂಡ 7ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣ ರಾಜ್ಯದ ಭದ್ರಾದ್ರಿ ಕೊತಗೂಡೆಂ ಜಿಲ್ಲೆಯ ಬೆಂಡಲಪಾಡು ಗ್ರಾಮದಲ್ಲಿ ಬುಧವಾರ (ಇಂದು) ನಡೆದಿದೆ.
ಬಾಲಕ ಸುಧೀರ್ ಬಾಬು (11) ಪುಸ್ತಕ ಖರೀದಿಸಲು ಪೋಷಕರಿಂದ ಹಣ ಕೇಳಿದ್ದನು. ಪೋಷಕರು ನಿರಾಕರಿಸಿದ್ದಾರೆ. ಇದರಿಂದ ನೊಂದುಕೊಂಡು ಬೆಂಡಲಪಾಡುವಿನ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದೇ ಜಿಲ್ಲೆಯ ತಲ್ಲಾಡ ಮಂಡಲದ ನಾರಾಯಣಪುರ ಗ್ರಾಮದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಪದವಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅನಾರೋಗ್ಯದಿಂದ ಖಿನ್ನತೆಗೆ ಒಳಗಾದ ಎಸ್.ವಿಜಯ್ (19) ಎಂಬಾತ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿನ ಹಾದಿ ತುಳಿದಿದ್ದಾನೆ. ವಿಜಯ್ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದ. ಅನಾರೋಗ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಆತನ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಾಮೂಹಿಕ ಆತ್ಮಹತ್ಯೆ ಪ್ರಕರಣ:ಗುಜರಾತ್ನಅಹಮದಾಬಾದ್ ಜಿಲ್ಲೆಯ ಧೋಲ್ಕಾ ಎಂಬಲ್ಲಿ ಕೆಲದಿನಗಳ ಹಿಂದೆ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ್ದರು. ಇದರಲ್ಲಿ ತಂದೆ ಮತ್ತು ಮಗ ಸಾವನ್ನಪ್ಪಿದ್ದರೆ, ತಾಯಿ ಹಾಗೂ ಮತ್ತೋರ್ವ ಮಗ ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆಯಲ್ಲಿ ಕಿರಣ್ ರಾಥೋಡ್ (52), ಹರ್ಷ ರಾಥೋಡ್ ಸಾವನ್ನಪ್ಪಿದ್ದಾರೆ. ನಿತಾಬೆನ್ ಕಿರಣ್ ರಾಥೋಡ್ ಮತ್ತು ಹರ್ಷಿಲ್ ರಾಥೋಡ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಿರಣ್ ಅವರ ಮಗಳು ಅದೇ ಗ್ರಾಮದ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದರು. ಕುಟುಂಬದ ವಿರೋಧದ ನಡುವೆಯೇ ವಿವಾಹವಾಗಿದ್ದಕ್ಕೆ ಕಿರಣ್ ಕುಟುಂಬ ಬೇಸರಗೊಂಡಿತ್ತು. ಬಳಿಕ ಅತ್ತೆಯ ಮನೆಯವರು ಕಿರುಕುಳ ನೀಡಿದಕ್ಕೆ ಮನನೊಂದು ಪತಿ ಪತ್ನಿ ಹಾಗೂ ಇಬ್ಬರು ಮಕ್ಕಳು ಒಟ್ಟಾಗಿ ವಿಷ ಸೇವಿಸಿದ್ದರು.
ವಿದ್ಯಾರ್ಥಿನಿ ಆತ್ಮಹತ್ಯೆ:ಅಶ್ಲೀಲ ವಿಡಿಯೋ ಮಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವುದಾಗಿ ಯುವಕರಿಬ್ಬರು ಬೆದರಿಕೆ ಹಾಕಿದ್ದರಿಂದ ಮನನೊಂದು 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆಯಲ್ಲಿ ಇತ್ತೀಚೆಗೆ ನಡೆದಿತ್ತು. ಸಾವಿಗೂ ಮುನ್ನ ಸಂತ್ರಸ್ತ ಯುವತಿ, ತನ್ನ ಸಾವಿಗೆ ಮಧು ಮತ್ತು ನಾಗೇಂದ್ರಸ್ವಾಮಿ ಕಾರಣ ಎಂದು ತಿಳಿಸಿ ಈ ಇಬ್ಬರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಕಿರುಕುಳದ ವಿರುದ್ಧ ಪ್ರತಿಭಟಿಸಿದ್ದ ವಿದ್ಯಾರ್ಥಿನಿಯನ್ನೇ ರೈಲಿನ ಮುಂದೆ ಎಸೆದ ಹುಡುಗರ ಗುಂಪು: ಇನ್ಸ್ಪೆಕ್ಟರ್, ಕಾನ್ಸ್ಟೇಬಲ್ ಅಮಾನತು