ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ತಾಲೀಮು ಆರಂಭಿಸಿವೆ. ಈಗಾಗಲೇ 65 ಪಕ್ಷಗಳು ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಒಕ್ಕೂಟವನ್ನು ಸೇರುವ ಮೂಲಕ ಚುನಾವಣಾ ಅಖಾಡಕ್ಕೆ ಸಜ್ಜುಗೊಳ್ಳುತ್ತಿವೆ. ಆದರೆ, ಸಂಸತ್ತಿನಲ್ಲಿ ಒಟ್ಟು 91 ಸದಸ್ಯರನ್ನು ಹೊಂದಿರುವ ಕನಿಷ್ಠ 11 ಪಕ್ಷಗಳು ತಟಸ್ಥ ಸ್ಥಿತಿಗೆ ಜಾರಿವೆ. ಇದರಲ್ಲಿ ಮೂರು ಪಕ್ಷಗಳು ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಒಡಿಶಾದಂತಹ ಮೂರು ದೊಡ್ಡ ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಒಟ್ಟಾಗಿ 63 ಸದಸ್ಯರನ್ನು ಲೋಕಸಭೆಗೆ ಕಳುಹಿಸುತ್ತವೆ.
2024ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಎದುರಿಸಲು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಒಗ್ಗೂಡುವ ಪ್ರಯತ್ನದಲ್ಲಿವೆ. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದಲ್ಲಿ 39 ಪಕ್ಷಗಳು ಇವೆ. ಇದರ ಪ್ರತಿಸ್ಪರ್ಧಿಯಾಗಿರುವ ಕಾಂಗ್ರೆಸ್ ನೇತೃತ್ವದ ಹೊಸ ಮೈತ್ರಿಕೂಟದಲ್ಲಿ 25 ಪಕ್ಷಗಳು ಇವೆ. ಮಂಗಳವಾರ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ಮೈತ್ರಿಕೂಟ ಇಂಡಿಯಾ (Indian National Developmental Inclusive Alliance - INDIA) ಎಂಬ ಹೆಸರಲ್ಲಿ ರೂಪಗೊಂಡಿದೆ.
ಇದನ್ನೂ ಓದಿ:ಲೋಕಸಭೆ ಚುನಾವಣೆಗೆ ನರೇಂದ್ರ ಮೋದಿ ನೇತೃತ್ವ, ಮೈತ್ರಿ ಸರ್ಕಾರ ರಚನೆ: ಎನ್ಡಿಎ ನಿರ್ಣಯ
ತಟಸ್ಥವಾಗಿರುವ ಪಕ್ಷಗಳು: ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್ಸಿಪಿ), ಬಿಜು ಜನತಾ ದಳ (ಬಿಜೆಡಿ), ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್), ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ), ತೆಲುಗು ದೇಶಂ ಪಕ್ಷ (ಟಿಡಿಪಿ), ಶಿರೋಮಣಿ ಅಕಾಲಿದಳ (ಎಸ್ಎಡಿ), ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್), ಜನತಾ ದಳ (ಜಾತ್ಯತೀತ) - ಜೆಡಿಎಸ್, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (ಆರ್ಎಲ್ಪಿ) ಮತ್ತು ಎಸ್ಎಡಿ (ಮನ್) ಪಕ್ಷಗಳು ಯಾವ ಮೈತ್ರಿಕೂಟವನ್ನೂ ಸೇರದೆ ತಟಸ್ಥವಾಗಿ ಉಳಿದಿವೆ.
2019ರಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್ಸಿಪಿ) ಮತ್ತು 2000ರಿಂದ ಒಡಿಶಾದಲ್ಲಿ ಆಡಳಿತ ನಡೆಸುತ್ತಿರುವ ಬಿಜು ಜನತಾ ದಳ (ಬಿಜೆಡಿ) ಸಂಸತ್ತಿನಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಪರವಾಗಿ ಹೆಚ್ಚಾಗಿ ಮತ ಚಲಾಯಿಸಿವೆ. 2014ರಲ್ಲಿ ಆಂಧ್ರಪ್ರದೇಶದಿಂದ ವಿಭಜನೆಗೊಂಡ ನಂತರದಿಂದ ತೆಲಂಗಾಣದಲ್ಲಿ ಆಡಳಿತ ನಡೆಸುತ್ತಿರುವ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಈ ವರ್ಷದ ಆರಂಭದಲ್ಲೇ ಪ್ರತಿಪಕ್ಷಗಳು ಮೈತ್ರಿಕೂಟ ಸ್ಥಾಪಿಸುವ ನಿಟ್ಟಿನಲ್ಲಿ ಸಾಕಷ್ಟು ಕಸರತ್ತು ನಡೆಸಿತ್ತು. ಆದರೆ, ಇದೀಗ ಹೊಸದಾಗಿ ರಚನೆಯಾದ ಪ್ರತಿಪಕ್ಷಗಳ ಒಕ್ಕೂಟದಿಂದ ಇದು ದೂರವೇ ಉಳಿದಿದೆ. ಚುನಾವಣೆಯವರೆಗೂ ಇದೇ ನಿಲುವನ್ನು ಈ ಪಕ್ಷಗಳು ಅನುಸರಿಸುತ್ತವೇ ಮತ್ತು ಮುಂದೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.