ಕರ್ನಾಟಕ

karnataka

ETV Bharat / bharat

ದೆಹಲಿಯ ಕಾಂಜಾವಾಲಾ ಹಿಟ್​ ಅಂಡ್​ ರನ್​ ಪ್ರಕರಣ: 11 ಪೊಲೀಸರು ಸಸ್ಪೆಂಡ್​ - ಕರ್ತವ್ಯಕ್ಕೆ ನಿಯೋಜಿಸಲಾದ 11 ಸಿಬ್ಬಂದಿ ಅಮಾನತು

ದೆಹಲಿ ಕಾಂಜಾವಾಲಾ ಪ್ರಕರಣದಲ್ಲಿ ದೆಹಲಿ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ಕೆಲಸದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ 3 ಪಿಸಿಆರ್ ವ್ಯಾನ್‌ಗಳು ಮತ್ತು 2 ಪಿಕೆಟ್‌ಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾದ 11 ಸಿಬ್ಬಂದಿ ಅಮಾನತುಗೊಳಿಸಿದ್ದಾರೆ. ಅಲ್ಲದೆ ಡಿಸಿಪಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಕಾಂಜಾವಾಲಾ ಕೊಲೆ ಪ್ರಕರಣ: 11 ಪೊಲೀಸರು ಸಸ್ಪೆಂಡ್​
11-policemen-suspended-in-kanjhawala-case

By

Published : Jan 13, 2023, 8:02 PM IST

ನವದೆಹಲಿ:ಕಾಂಜಾವಾಲಾ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಗೃಹ ಸಚಿವಾಲಯದ ಆದೇಶದ ಮೇರೆಗೆ ದೆಹಲಿ ಪೊಲೀಸ್ ಇಲಾಖೆ ಶುಕ್ರವಾರ ಮಹತ್ವದ ಕ್ರಮ ಕೈಗೊಂಡಿದೆ. ತಕ್ಷಣದಿಂದ ಜಾರಿಗೆ ಬರುವಂತೆ 11 ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಇವರಲ್ಲಿ ಇಬ್ಬರು ಸಬ್ ಇನ್ಸ್ ಪೆಕ್ಟರ್, 4 ಅಸಿಸ್ಟೆಂಟ್ ಸಬ್ ಇನ್ಸ್​​ಪೆಕ್ಟರ್, 4 ಹೆಡ್ ಕಾನ್ಸ್​ಟೇಬಲ್, ಓರ್ವ ಕಾನ್ ಸ್ಟೇಬಲ್ ಸೇರಿದ್ದಾರೆ. ಅಮಾನತುಗೊಂಡ ಪೊಲೀಸರಲ್ಲಿ 6 ಮಂದಿ ಪಿಸಿಆರ್ ಕರ್ತವ್ಯಕ್ಕೆ ಹಾಗೂ 5 ಮಂದಿ ಪೊಲೀಸರು ಪಿಕೆಟ್‌ಗೆ ನಿಯೋಜಿತರಾಗಿದ್ದರು. ಇವರೆಲ್ಲರ ಮೇಲೆ ಕೆಲಸದಲ್ಲಿ ನಿರ್ಲಕ್ಷ್ಯದ ಆರೋಪ ಹೊರಿಸಲಾಗಿದೆ. ಘಟನೆಯನ್ನು ದುರ್ಘಟನೆ ಎಂದು ಬಣ್ಣಿಸಿದ ಡಿಸಿಪಿಗೆ ದೆಹಲಿ ಪೊಲೀಸ್ ಇಲಾಖೆ ನೋಟಿಸ್ ಜಾರಿ ಮಾಡಿದೆ ಎಂದು ಹೇಳಲಾಗುತ್ತಿದೆ.

ಕಾಂಜಾವಾಲಾ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಗಳು

ಇದಕ್ಕೂ ಮುನ್ನ ಗುರುವಾರ ತಡರಾತ್ರಿ ದೆಹಲಿ ಸರ್ಕಾರವು ತನ್ನ ವಿಸ್ತೃತ ತನಿಖಾ ವರದಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿತ್ತು. ವರದಿಯನ್ನು ಗಮನದಲ್ಲಿಟ್ಟುಕೊಂಡು, ಮೂರು ಪಿಸಿಆರ್‌ಗಳು ಮತ್ತು ಎರಡು ಪೊಲೀಸ್ ಪಿಕೆಟ್‌ಗಳಲ್ಲಿ ನಿಯೋಜಿಸಲಾದ ಪೊಲೀಸರನ್ನು ಅಮಾನತುಗೊಳಿಸುವಂತೆ ಗೃಹ ಸಚಿವಾಲಯವು ದೆಹಲಿ ಪೊಲೀಸ್ ಆಯುಕ್ತರಿಗೆ ಸೂಚಿಸಿತ್ತು. ಇದರ ನಂತರ 11 ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಪ್ರಕರಣದ ಆರೋಪಿಗಳ ವಿರುದ್ಧ ಆದಷ್ಟು ಬೇಗ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿ, ಅವರಿಗೆ ಶಿಕ್ಷೆಯಾಗುವಂತೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಚಿವಾಲಯ ಸೂಚಿಸಿದೆ.

ಕಾರಿನಲ್ಲಿದ್ದ ಆರೋಪಿಗಳೆಲ್ಲರ ವಿರುದ್ಧ ಕೊಲೆ ಕೇಸ್​:ಕಾರಿನಲ್ಲಿದ್ದ ಎಲ್ಲ ಆರೋಪಿಗಳ ಮೇಲೆ ಸೆಕ್ಷನ್ 302ರ ಪ್ರಕರಣ ದಾಖಲಿಸಲು ಗೃಹ ಸಚಿವಾಲಯ ಆದೇಶಿಸಿದೆ ಎಂದು ಹೇಳಲಾಗುತ್ತಿದೆ. ಇದರ ನಂತರ ಶೀಘ್ರದಲ್ಲೇ ಪೊಲೀಸರು ಇವರೆಲ್ಲರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಿದ್ದಾರೆ ಎನ್ನಲಾಗಿದೆ. ಇಲ್ಲಿಯವರೆಗೂ ದೆಹಲಿ ಪೊಲೀಸರು ಪ್ರಕರಣದಲ್ಲಿ ಈ ಸೆಕ್ಷನ್ ವಿಧಿಸಿರಲಿಲ್ಲ. 302 ಅಡಿ ಪ್ರಕರಣ ದಾಖಲಿಸುವಂತೆ ಮೃತ ಯುವತಿ ಅಂಜಲಿ ಕುಟುಂಬಸ್ಥರು ನಿರಂತರವಾಗಿ ಒತ್ತಾಯಿಸುತ್ತಿದ್ದರು. ಈ ಪ್ರಕರಣದಲ್ಲಿ ಮೊದಲಿನಿಂದಲೂ ಪೊಲೀಸರ ನಿರ್ಲಕ್ಷ್ಯದ ಆರೋಪ ಕೇಳಿ ಬರುತ್ತಿದೆ. ಅಂಜಲಿಯನ್ನು ಕಾರಿನ ಕೆಳಭಾಗದಲ್ಲಿ ಸಿಕ್ಕಿಸಿ 13 ಕಿಲೋಮೀಟರ್ ಎಳೆದೊಯ್ದರೂ ಇದನ್ನು ಒಬ್ಬನೇ ಒಬ್ಬ ಪೊಲೀಸ್ ಸಿಬ್ಬಂದಿ ಗಮನಿಸದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಡಿಸಿಪಿ ಹರೇಂದ್ರ ಕುಮಾರ್ ಸಿಂಗ್ ಅವರ ಕೋರಿಕೆಯ ಮೇರೆಗೆ ಗುಜರಾತ್‌ನ ಗಾಂಧಿನಗರದಿಂದ 5 ಜನರ ವಿಧಿವಿಜ್ಞಾನ ತಜ್ಞರ ತಂಡ ನಿನ್ನೆ ಅಂದರೆ ಗುರುವಾರ ದೆಹಲಿಗೆ ತಲುಪಿತ್ತು. ಅವರು ಈ ಪ್ರಕರಣದಲ್ಲಿ ಹಲವು ವಿಧಿವಿಜ್ಞಾನ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಅದರ ವರದಿಗಾಗಿ ಕಾಯಲಾಗುತ್ತಿದೆ. ಜನವರಿ 2 ರಂದು, ಗೃಹ ಸಚಿವಾಲಯವು ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸ್ ವಿಶೇಷ ಆಯುಕ್ತ ಶಾಲಿನಿ ಸಿಂಗ್ ಅವರಿಗೆ ವಹಿಸಿತ್ತು. ಅವರು ಈ ತನಿಖೆಯನ್ನು ಮಾತ್ರ ಪೂರ್ಣಗೊಳಿಸಿದ್ದು, ತಮ್ಮ ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಿದರು. ಪ್ರಸ್ತುತ ಪ್ರಕರಣದಲ್ಲಿ ಆರು ಆರೋಪಿಗಳು ಜೈಲಿನಲ್ಲಿದ್ದಾರೆ.

ಏನಿದು ಪ್ರಕರಣ?: ದೆಹಲಿಯ ಸುಲ್ತಾನ್‌ಪುರಿಯಲ್ಲಿ ಹೊಸ ವರ್ಷಾಚರಣೆಯ ನಡುವೆ 23 ವರ್ಷದ ಅಂಜಲಿಯ ಜೊತೆ ದುರಂತವೊಂದು ನಡೆಯಿತು. ಸ್ಕೂಟಿಯಲ್ಲಿ ಹೋಗುತ್ತಿದ್ದ ಅಂಜಲಿಗೆ ಕಾರು ಡಿಕ್ಕಿ ಹೊಡೆದಿತ್ತು. ನಂತರ ಅಂಜಲಿಯನ್ನು ಕಾರಿನ ಬುಡದಲ್ಲಿ ಸಿಕ್ಕಿಸಿ 12 ಕಿಮೀವರೆಗೂ ಎಳೆದೊಯ್ಯಲಾಗಿತ್ತು. ದುಷ್ಟರ ಈ ಕೃತ್ಯದಿಂದ ಅಂಜಲಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಕಾರಿನಲ್ಲಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಳಿಕ ಮತ್ತಿಬ್ಬರು ಆರೋಪಿಗಳ ಹೆಸರು ಬಯಲಿಗೆ ಬಂದಿತ್ತು. ಅದೇ ವೇಳೆಗೆ ಅಂಜಲಿಯ ಸ್ನೇಹಿತೆ ನಿಧಿ ಹೆಸರೂ ಮುನ್ನೆಲೆಗೆ ಬಂತು. ಪೊಲೀಸರು ಆಕೆಯನ್ನೂ ವಿಚಾರಣೆ ನಡೆಸಿದ್ದಾರೆ. ಘಟನೆಯ ನಂತರ ಸಿಕ್ಕಿಬಿದ್ದ ಏಳು ಮಂದಿಯನ್ನು ಪೊಲೀಸರು ಆರೋಪಿಗಳನ್ನಾಗಿ ಮಾಡಿದ್ದಾರೆ. ಅವರಲ್ಲಿ ಒಬ್ಬರಿಗೆ ನ್ಯಾಯಾಲಯ ಜಾಮೀನು ನೀಡಿದೆ.

ಇದನ್ನೂ ಓದಿ: ಯುವತಿ ದೇಹ ನಾಲ್ಕು ಕಿಮೀ ಎಳೆದೊಯ್ದ ಪ್ರಕರಣ: ಮತ್ತೊಂದು ಸಿಸಿಟಿವಿ ವಿಡಿಯೋ ವೈರಲ್​​

ABOUT THE AUTHOR

...view details