ಕರ್ನಾಟಕ

karnataka

ETV Bharat / bharat

ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ: 11 ಮಂದಿ ಸಾವು, ಹಲವರಿಗೆ ಗಾಯ - Rajasthan road accident

ರಾಜಸ್ಥಾನದ ಜೈಪುರ-ಆಗ್ರಾ ಹೆದ್ದಾರಿಯಲ್ಲಿ ಟ್ರೈಲರ್ ವಾಹನವೊಂದು ಬಸ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. (ಫೋಟೋ- ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವುದು)

ರಸ್ತೆ ಅಪಘಾತ
road accident

By ETV Bharat Karnataka Team

Published : Sep 13, 2023, 8:38 AM IST

Updated : Sep 13, 2023, 9:31 AM IST

ರಾಜಸ್ಥಾನ : ಭರತ್‌ಪುರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ನಡೆದಿದೆ. ಹಂತ್ರಾ ಬಳಿಯ ಜೈಪುರ-ಆಗ್ರಾ ಹೆದ್ದಾರಿಯಲ್ಲಿ ಟ್ರೈಲರ್ ವಾಹನ ಬಸ್‌ಗೆ ಡಿಕ್ಕಿಯಾಗಿ 11 ಜನರು ಸಾವನ್ನಪ್ಪಿದ್ದಾರೆ. ಇತರೆ 12 ಮಂದಿ ಗಾಯಗೊಂಡಿದ್ದಾರೆ ಎಂದು ಎಸ್‌ಪಿ ಮೃದುಲ್ ಕಚಾವಾ ಮಾಹಿತಿ ನೀಡಿದ್ದಾರೆ.

ಪೊಲೀಸರು ಗಾಯಾಳುಗಳನ್ನು ಆರ್‌ಬಿಎಂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತದೇಹಗಳನ್ನು ಶವಾಗಾರದಲ್ಲಿ ಇರಿಸಲಾಗಿದೆ. ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಗುಜರಾತ್‌ನ ಭಾವನಗರದಿಂದ ಉತ್ತರ ಪ್ರದೇಶದ ಮಥುರಾಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಎಸ್‌ಪಿ ಲಖನ್ ಸಿಂಗ್, "ಇಂದು ಮುಂಜಾನೆ ಗುಜರಾತ್‌ನ ಭಾವನಗರದ ಜನರು ಬಸ್‌ನಲ್ಲಿ ಪುಷ್ಕರ್‌ಗೆ ಭೇಟಿ ನೀಡಿದ ಬಳಿಕ ಉತ್ತರ ಪ್ರದೇಶದ ಮಥುರಾ ವೃಂದಾವನಕ್ಕೆ ತೆರಳುತ್ತಿದ್ದರು. ಹಂತಾರ ಬಳಿ ಬಸ್‌ನ ಟಯರ್​​ ಪಂಚರ್​ ಆಗಿದ್ದು, ಅಲ್ಲೇ ಹೆದ್ದಾರಿ ಬದಿಯಲ್ಲಿ ಬಸ್ ನಿಲ್ಲಿಸಲಾಗಿತ್ತು. ಕೆಲ ಪ್ರಯಾಣಿಕರು ಬಸ್ಸಿನಿಂದ ಹೊರಗಿಳಿದು ಹಿಂಭಾಗದಲ್ಲಿ ನಿಂತಿದ್ದರು, ಉಳಿದವರು ಬಸ್​ನೊಳಗಿದ್ದರು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಜೈಪುರ ಕಡೆಯಿಂದ ವೇಗವಾಗಿ ಬಂದ ಟ್ರೈಲರ್, ಬಸ್​ನ ಹಿಂಭಾಗಕ್ಕೆ ಬಲವಾಗಿ ಡಿಕ್ಕಿ ಹೊಡೆದು, ನಿಂತಿದ್ದ ಬಸ್ ಅನ್ನು ಸುಮಾರು 30 ಮೀಟರ್‌ವರೆಗೆ ಎಳೆದೊಯ್ದಿದೆ" ಎಂದರು.

ಇದನ್ನೂ ಓದಿ :ಸರಣಿ ಅಪಘಾತ.. ಸಂಪೂರ್ಣ ನಜ್ಜುಗುಜ್ಜಾದ ಕಾರು.. ಅದೃಷ್ಟವಶಾತ್​ ಪಾರಾದ ಚಾಲಕ: CCTV Video

ಅಪಘಾತದಲ್ಲಿ ಬಸ್ಸಿನ ಸುತ್ತ ನಿಂತಿದ್ದ ಮತ್ತು ಬಸ್‌ನೊಳಗೆ ಕುಳಿತಿದ್ದ ಎಲ್ಲ ಪ್ರಯಾಣಿಕರು ಸಿಲುಕಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಆಂಬ್ಯುಲೆನ್ಸ್ ಮತ್ತು ಇತರೆ ವಾಹನಗಳ ಸಹಾಯದಿಂದ ಆರ್‌ಬಿಎಂ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ :ಚಿಕ್ಕಮಗಳೂರಿನಲ್ಲಿ ಅಪಘಾತ ಪ್ರಕರಣ.. ಹಾಗೆ ಅನ್ನಬಾರದಿತ್ತು, ಅದಕ್ಕೆ ಕ್ಷಮೆ ಕೇಳ್ತೇನಿ ಎಂದ ನಟ ಚಂದ್ರಪ್ರಭ

ಮೃತರ ಮಾಹಿತಿ: ಗುಜರಾತ್‌ನ ಭಾವನಗರದ ಡೆಹೋರ್ ನಿವಾಸಿಗಳಾದ ಅಣ್ಣು, ನಂದ್ರಂ, ಲಲ್ಲು, ಭಾರತ್, ಲಾಲ್ ಭಾಯಿ, ಅಂಬವೆನ್, ಕಮ್ಮುವೆನ್, ರಾಮು ವೆನ್, ಮಧು ವೆನ್, ಅಂಜುವೆನ್ ಮತ್ತು ಮಧುವೆನ್ ಮೃತಪಟ್ಟಿದ್ದಾರೆ. ಇನ್ನುಳಿದ 12 ಮಂದಿ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ.

ಇದನ್ನೂ ಓದಿ :ವಿಜಯನಗರದಲ್ಲಿ ಹೊತ್ತಿ ಉರಿದ ಖಾಸಗಿ ಬಸ್‌ : 30 ಮಂದಿ ಪ್ರಯಾಣಿಕರು ಪಾರು

ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಅವಘಡ: ಕಳೆದ 2 ದಿನಗಳ ಹಿಂದೆ ದಿಢೀರ್ ಬೆಂಕಿ ಹೊತ್ತಿಕೊಂಡು ಖಾಸಗಿ ಬಸ್​ವೊಂದು ಹೊತ್ತಿ ಉರಿದ ಘಟನೆ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿತ್ತು. ಬೆಂಗಳೂರಿನಿಂದ ಹೊಸಪೇಟೆ ಮಾರ್ಗವಾಗಿ ರಾಯಚೂರು ಜಿಲ್ಲೆಯ ಮಸ್ಕಿ, ಹಟ್ಟಿಗೆ ತೆರಳುತ್ತಿದ್ದ ಬಸ್​ನ ಟಯರ್ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿತ್ತು. ಬಸ್​ನಲ್ಲಿದ್ದ 30 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು.

Last Updated : Sep 13, 2023, 9:31 AM IST

ABOUT THE AUTHOR

...view details