ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ವಿಭಜನೆಯ ಹಾದಿ ಹಿಡಿದಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದು, ಅದಕ್ಕೆ ಇಂಬು ನೀಡುವಂತೆ ಇದೀಗ ಶಿವಸೇನೆ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿಕಟವರ್ತಿ ಎಂದು ಪರಿಗಣಿಸಲ್ಪಟ್ಟಿರುವ ಏಕನಾಥ್ ಶಿಂಧೆ ಸೋಮವಾರ ಸಂಜೆಯಿಂದ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರ ಜೊತೆ 11 ಶಾಸಕರೂ ನಾಪತ್ತೆಯಾಗಿದ್ದು, ಸೂರತ್ನ ಹೋಟೆಲ್ವೊಂದರಲ್ಲಿ ತಂಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಆ ಎಲ್ಲ ಶಾಸಕರು ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ಜೊತೆ ಸಂಪರ್ಕದಲ್ಲಿದ್ದಾರೆ ಎಂಬುದು ತಿಳಿದು ಬಂದಿದೆ.
ಕಳೆದ ಕೆಲವು ವರ್ಷಗಳಿಂದ ಸಿಟ್ಟಿಗೆದ್ದಿದ್ದ ಶಿವಸೇನೆ ನಾಯಕ ಏಕನಾಥ್ ಶಿಂಧೆ ಮತ್ತು ಅವರ ಗುಂಪಿನ ಶಾಸಕರು ವಿಧಾನಪರಿಷತ್ತು ಚುನಾವಣೆ ನಂತರ ಕೈಗೆ ಸಿಗದಂತಾಗಿದ್ದಾರೆ. ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದಾರೆ. ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ವದಂತಿ ಹಬ್ಬಿದ ಕೂಡಲೇ ಎಲ್ಲ ಶಾಸಕರ ಸಭೆ ಕರೆಯುವಂತೆ ಮುಖ್ಯಮಂತ್ರಿ ಆದೇಶ ನೀಡಿದ್ದಾರೆ.
ಸೋಮವಾರ ಒಟ್ಟು ಹತ್ತು ಸ್ಥಾನಗಳಿಗೆ ನಡೆದ ವಿಧಾನ ಪರಿಷತ್ತು ಚುನಾವಣೆಯಲ್ಲಿ ಶಿವಸೇನೆ ತನ್ನ ಎರಡೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಶಿವಸೇನೆಯೂ ಕಾಂಗ್ರೆಸ್ ಜೊತೆಯೂ ಒಡಕು ಸೃಷ್ಟಿಸಿಕೊಂಡಿದೆ ಎಂಬ ಮಾತು ಕೇಳಿಬರುತ್ತಿದೆ. ಒಡೆದ ಮತಗಳಿಂದಾಗಿ ಶಿವಸೇನೆ ಇಬ್ಭಾಗವಾಗುತ್ತಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ದಟ್ಟವಾಗಿದೆ.
ಠಾಕ್ರೆ ಮತ್ತು ಶಿಂಧೆ ನಡುವೆ ವಾಗ್ವಾದ :ಶಿವಸೇನೆಯ 56ನೇ ವಾರ್ಷಿಕೋತ್ಸವದಂದು ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ನಡುವೆ ಜಟಾಪಟಿ ನಡೆದಿತ್ತು. ವಾರ್ಷಿಕೋತ್ಸವದ ದಿನ ಮಾರ್ಗದರ್ಶನ ನೀಡಲು ನಿರಾಕರಿಸಿದ್ದ ಕಾರಣ, ಆ ದಿನಗಳಿಂದ ಏಕನಾಥ್ ಶಿಂಧೆ ಅಸಮಾಧಾನಗೊಂಡಿದ್ದರು. ಆದರೆ, ವಿಧಾನಪರಿಷತ್ ಚುನಾವಣೆ ಬಳಿಕ ಏಕನಾಥ್ ಶಿಂಧೆ ಹಾಗೂ ಅವರ ಆಪ್ತರು ನಾಪತ್ತೆಯಾಗಿದ್ದಾರೆ. ಶಿಂಧೆ ಅವರನ್ನು ಶಿವಸೇನೆ ನಿರಂತರವಾಗಿ ಸಂಪರ್ಕಿಸುತ್ತಿದೆ. ಆದರೆ, ಶಿಂಧೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿರುವುದರಿಂದ ಶಿವಸೇನೆಗೆ ತಲೆನೋವು ಹೆಚ್ಚಾಗಿದೆ.