ಹೈದರಾಬಾದ್:ಗುಪ್ತಾಂಗ, ಒಳ ಉಡುಪು, ಗುದದ್ವಾರದಲ್ಲಿ ಡ್ರಗ್ಸ್ ಇಟ್ಟುಕೊಂಡು ಸಾಗಾಟ ಮಾಡುವುದು ಸರ್ವೆ ಸಾಮಾನ್ಯ. ಆದರೆ, ಇಲ್ಲೊಬ್ಬ ವ್ಯಕ್ತಿ 109 ಹೆರಾಯಿನ್ ಕ್ಯಾಪ್ಸುಲ್ ನುಂಗಿ ಸ್ಮಗ್ಲಿಂಗ್ ಮಾಡಲು ಹೋಗಿ ಇದೀಗ ಕಸ್ಟಮ್ಸ್ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದಾನೆ. ಹೈದರಾಬಾದ್ನ ಶಂಶಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ತಾಂಜಾನಿಯಾ ನಿವಾಸಿ ಏಪ್ರಿಲ್ 26ರಂದು ಜೊಹಾನ್ಸ್ಬರ್ಗ್ನಿಂದ ಹೈದರಾಬಾದ್ಗೆ ಬಂದಿದ್ದರು. ಈ ವೇಳೆ ಈತನ ಮೇಲೆ ಅನುಮಾನ ವ್ಯಕ್ತಪಡಿಸಿದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಆತನ ಹೊಟ್ಟೆಯಿಂದ ಸುಮಾರು 109 ಹೆರಾಯಿನ್ ಕ್ಯಾಪ್ಸುಲ್ ಹೊರತೆಗೆಯಲಾಗಿದೆ. ಇದಕ್ಕಾಗಿ ವೈದ್ಯರು ಸುಮಾರು ಆರು ದಿನ ತೆಗೆದುಕೊಂಡಿದ್ದಾರೆ. ವ್ಯಕ್ತಿಯ ಹೊಟ್ಟೆಯಲ್ಲಿ ಸುಮಾರು 1,389 ಗ್ರಾಂ ಹೆರಾಯಿನ್ ಹೊರತೆಗೆಯಲಾಗಿದ್ದು, ಇದರ ಒಟ್ಟು ಮೌಲ್ಯ 11.53 ಕೋಟಿ ರೂ. ಎಂದು ತಿಳಿದು ಬಂದಿದೆ.