ಭಾರತೀಯ ವಿಜ್ಞಾನ ಕಾಂಗ್ರೆಸ್ ಉದ್ಘಾಟಿಸಿದ ಪ್ರಧಾನಿ ಮೋದಿ ನಾಗ್ಪುರ (ಮಹಾರಾಷ್ಟ್ರ): ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ 108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ (ISC) ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಈ ವರ್ಷದ ISC ಅನ್ನು ಮಹಾರಾಷ್ಟ್ರದ ರಾಷ್ಟ್ರಸಂತ್ ತುಕಾಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.
ವಿಶ್ವದ ಅಗ್ರ 10 ದೇಶಗಳಲ್ಲಿ ಭಾರತಕ್ಕೆ ಸ್ಥಾನ: ಐದು ದಿನ ನಡೆಯುವ ಕಾರ್ಯಕ್ರಮದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಮುಂದಿನ 25 ವರ್ಷಗಳಲ್ಲಿ ಭಾರತ ಎಷ್ಟು ಎತ್ತರಕ್ಕೆ ಬೆಳೆಯಲಿದೆಯೋ, ಅದರಲ್ಲಿ ವಿಜ್ಞಾನದ ಪಾತ್ರ ಪ್ರಮುಖವಾಗಿದೆ. ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತವು ವಿಶ್ವದ ಅಗ್ರ 10 ರಾಷ್ಟ್ರಗಳಲ್ಲಿ ತನ್ನ ಸ್ಥಾನವನ್ನು ಕಂಡುಕೊಂಡಿದೆ ಎಂದು ಅವರು ಹೇಳಿದರು.
2015 ರವರೆಗೆ, 130 ದೇಶಗಳಲ್ಲಿ, ಭಾರತವು ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ 81ನೇ ಸ್ಥಾನದಲ್ಲಿತ್ತು. 2022 ರಲ್ಲಿ ನಾವು 40ನೇ ಸ್ಥಾನಕ್ಕೆ ಏರಿದ್ದೇವೆ. ಪಿಎಚ್‌ಡಿ ಮತ್ತು ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯಲ್ಲಿ ಭಾರತವು ಅಗ್ರ ಮೂರು ದೇಶಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇಡೀ ಮಾನವ ಸಂಕುಲ ಮತ್ತು ಭಾರತದಲ್ಲಿ ಹೆಚ್ಚುತ್ತಿರುವ ಅಗತ್ಯಗಳಿಗೆ ಮುಖ್ಯವಾದ ವಿಷಯಗಳ ಮೇಲೆ ಕೆಲಸ ಮಾಡಲು ವೈಜ್ಞಾನಿಕ ಸಮುದಾಯಕ್ಕೆ ಪ್ರಧಾನಮಂತ್ರಿ ಕರೆ ನೀಡಿದರು. ಇಂಧನ ಅಗತ್ಯತೆಗಳ ಆವಿಷ್ಕಾರದತ್ತ ವೈಜ್ಞಾನಿಕ ಸಮುದಾಯವು ಕೆಲಸ ಮಾಡಿದರೆ ಅದು ದೇಶಕ್ಕೆ ಸಹಾಯ ಮಾಡುತ್ತದೆ. ಮಹಿಳೆಯರ ಹೆಚ್ಚುತ್ತಿರುವ ಭಾಗವಹಿಸುವಿಕೆ ಸಮಾಜ ಮತ್ತು ವಿಜ್ಞಾನದ ಪ್ರಗತಿಯ ಪ್ರತಿಬಿಂಬವಾಗಿದೆ ಎಂದು ಮೋದಿ ಹೇಳಿದರು.
ಇದನ್ನೂ ಓದಿ:ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯ: ಪ್ರಧಾನಿ ಮೋದಿ, ಕೇಂದ್ರ ಸಚಿವ ಜೋಶಿ ಸೇರಿ ಗಣ್ಯರ ಸಂತಾಪ
21ನೇ ಶತಮಾನದಲ್ಲಿ ಭಾರತದಲ್ಲಿ ನಾವು ಎರಡು ವಿಷಯಗಳನ್ನು ಹೊಂದಿದ್ದೇವೆ. ಅದರಲ್ಲಿ ಒಂದು ಡೇಟಾ ಮತ್ತೊಂದು ತಂತ್ರಜ್ಞಾನ. ಇವು ಭಾರತದ ವೈಜ್ಞಾನಿಕ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಲ್ಲವು. ದತ್ತಾಂಶ ವಿಶ್ಲೇಷಣೆಯು ವೇಗವಾಗಿ ಮುಂದುವರಿಯುತ್ತಿದೆ ಎಂದು ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಿಳಾ ಸಬಲೀಕರಣದೊಂದಿಗೆ ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಈ ವರ್ಷದ ISC ಯ ಕೇಂದ್ರಬಿಂದುವಾಗಿದೆ. ವಿಜ್ಞಾನ ಸುಸ್ಥಿರ ಅಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಕುರಿತ ವಿಷಯಗಳ ಚರ್ಚೆಗೆ ಸಾಕ್ಷಿಯಾಗಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಹಿಳೆಯರ ಕೊಡುಗೆಯನ್ನು ಪ್ರದರ್ಶಿಸುವ ವಿಶೇಷ ಕಾರ್ಯಕ್ರಮವೂ ನಡೆಯಲಿದೆ. ಇದು ಹೆಸರಾಂತ ಮಹಿಳಾ ವಿಜ್ಞಾನಿಗಳ ಉಪನ್ಯಾಸಗಳಿಗೆ ಸಾಕ್ಷಿಯಾಗಲಿದೆ ಎಂದರು.
ಇತರ ಕಾರ್ಯಕ್ರಮಗಳ ಆಯೋಜನೆ: ISC ಜೊತೆಗೆ ಹಲವಾರು ಇತರ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ. ಮಕ್ಕಳಲ್ಲಿ ವೈಜ್ಞಾನಿಕ ಆಸಕ್ತಿ ಮತ್ತು ಮನೋಧರ್ಮವನ್ನು ಉತ್ತೇಜಿಸಲು ಮಕ್ಕಳ ವಿಜ್ಞಾನ ಕಾಂಗ್ರೆಸ್ನನ್ನು ಆಯೋಜಿಸಲಾಗುವುದು. ರೈತ ವಿಜ್ಞಾನ ಕಾಂಗ್ರೆಸ್ ಜೈವಿಕ ಆರ್ಥಿಕತೆಯನ್ನು ಸುಧಾರಿಸಲು ಮತ್ತು ಯುವಕರನ್ನು ಕೃಷಿಯತ್ತ ಆಕರ್ಷಿಸಲು ವೇದಿಕೆಯನ್ನು ಒದಗಿಸುತ್ತದೆ. ಬುಡಕಟ್ಟು ವಿಜ್ಞಾನ ಕಾಂಗ್ರೆಸ್ ಕೂಡ ನಡೆಯಲಿದೆ. ಇದು ಬುಡಕಟ್ಟು ಮಹಿಳೆಯರ ಸಬಲೀಕರಣದತ್ತ ಗಮನ ಹರಿಸುವುದರೊಂದಿಗೆ ಸ್ಥಳೀಯ ಪ್ರಾಚೀನ ಜ್ಞಾನ ವ್ಯವಸ್ಥೆ ಮತ್ತು ಅಭ್ಯಾಸದ ವೈಜ್ಞಾನಿಕ ಪ್ರದರ್ಶನಕ್ಕೆ ವೇದಿಕೆಯಾಗಲಿದೆ.