ಅಹಮದಾಬಾದ್:ಕೋವಿಡ್-19, ಬದಲಾದ ಜೀವನ ಶೈಲಿ, ಒತ್ತಡ ಸೇರಿದಂತೆ ಹಲವು ಕಾರಣಗಳಿಂದಾಗಿ ದೇಶದಲ್ಲಿ ಹೃದಯಾಘಾತಕ್ಕೀಡಾಗಿ ಸಾವು ಸಂಭವಿಸುವ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಆತಂಕದ ಸಂಗತಿಯ ನಡುವೆ, ಗುಜರಾತ್‌ನಲ್ಲಿ ಕಳೆದ 6 ತಿಂಗಳಲ್ಲಿ 1 ಸಾವಿರಕ್ಕೂ ಅಧಿಕ ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಈ ಪೈಕಿ ಹದಿಹರೆಯದವರೇ ಹೆಚ್ಚು ಎಂಬ ಅಚ್ಚರಿಯ ಸಂಗತಿಯನ್ನು ಅಲ್ಲಿನ ಸರ್ಕಾರವೇ ತಿಳಿಸಿದೆ.
ಶಿಕ್ಷಣ ಸಚಿವ ಕುಬೇರ್ ದಿಂಡೋರ್ ಈ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ್ದು, ಕಳೆದ ಆರು ತಿಂಗಳಲ್ಲಿ ಗುಜರಾತ್‌ನಲ್ಲಿ ಒಟ್ಟು 1,052 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಮೃತರಲ್ಲಿ ಶೇ.80ರಷ್ಟು ಮಂದಿ 11 ರಿಂದ 25ರ ವಯೋಮಾನದವರು ಹೆಚ್ಚು ಎಂದು ಮಾಹಿತಿ ನೀಡಿದ್ದಾರೆ.
ದಿನಕ್ಕೆ 173 ತುರ್ತು ಕರೆ:ರಾಜ್ಯದಲ್ಲಿ ದಿನಕ್ಕೆ 173 ಹೃದಯ ಸಂಬಂಧಿ ಕಾಯಿಲೆಗೆ ತುತ್ತಾದವರೇ 108 ಆಂಬ್ಯುಲೆನ್ಸ್ಗಳಿಗೆ ತುರ್ತು ಕರೆ ಮಾಡುತ್ತಿದ್ದಾರೆ. ಇದರಲ್ಲಿ ಹೆಚ್ಚಿನವರು 25 ವರ್ಷದ ಒಳಗಿನವರೇ ಆಗಿದ್ದಾರೆ. ಇದು ಆತಂಕದ ವಿಚಾರ. ಶಾಲೆ, ಸಾರ್ವಜನಿಕ ಕಾರ್ಯಕ್ರಮ, ಕ್ರಿಕೆಟ್ ಆಡುವಾಗ, ಗರ್ಭಾ ನೃತ್ಯ ಮಾಡುವಾಗಲೇ ಹಲವರು ಹಾರ್ಟ್ ಅಟ್ಯಾಕ್ಗೆ ಒಳಗಾಗಿ ಸಾವಿಗೀಡಾದ ಪ್ರಕರಣಗಳು ದಾಖಲಾಗಿವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈವರೆಗೂ ಸಾವನ್ನಪ್ಪಿದ ವಿದ್ಯಾರ್ಥಿಗಳು, ಯುವಕರಲ್ಲಿ ಸ್ಥೂಲಕಾಯದ ಸಮಸ್ಯೆ ಇರಲಿಲ್ಲ. ಆದಾಗ್ಯೂ ಅವರು ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಶೇಕಡಾವಾರು ಲೆಕ್ಕಾಚಾರದಲ್ಲಿ 80 ಪ್ರತಿಶತದಷ್ಟು 25 ವರ್ಷದ ವಯಸ್ಸಿನವರೇ ಆಗಿರುವುದು ತೀವ್ರ ಕಳವಳ ಉಂಟುಮಾಡಿದೆ. ಹದಿಹರೆಯದವರೇ ಬಲಿಯಾಗುತ್ತಿರುವುದು ಯುವಕರಲ್ಲಿ ಆತಂಕ ಮೂಡಿಸಿದೆ ಎಂದು ಅವರು ಹೇಳಿದರು.