ಚಂಡೀಗಢ :ಪಂಜಾಬ್ನಲ್ಲಿ ಈ ವರ್ಷ ಬೆಳೆಯಲಾದ ಗೋಧಿಯ ಪ್ರಮಾಣ 105 ಲಕ್ಷ ಮೆಟ್ರಿಕ್ ಟನ್‌ಗಳನ್ನು ದಾಟಿದೆ. ಇದು ಕಳೆದ ವರ್ಷ ಬೆಳೆಯಲಾದ 102.7 ಲಕ್ಷ ಮೆಟ್ರಿಕ್ ಗೋಧಿಯ ಪ್ರಮಾಣವನ್ನು ಮೀರಿಸಿದೆ. ಈಗಾಗಲೇ 100 ಲಕ್ಷ ಮೆಟ್ರಿಕ್ ಟನ್‌ಗಿಂತ ಹೆಚ್ಚು ಗೋಧಿಯನ್ನು ಸರ್ಕಾರಿ ಸಂಸ್ಥೆಗಳು ಖರೀದಿಸಿವೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಲಾಲ್ ಚಂದ್ ಕತರುಚಕ್ ಹೇಳಿದ್ದಾರೆ. ಶುಕ್ರವಾರ 4.5 ಲಕ್ಷ ಮೆಟ್ರಿಕ್ ಟನ್ ಗೋಧಿ ಮಂಡಿಗಳಿಗೆ ಬಂದಿದ್ದು, ಇದೇ ಪ್ರಮಾಣದಲ್ಲಿ ಗೋಧಿ ಬರುವುದು ಮುಂದುವರಿದರೆ ಈ ವರ್ಷ ಒಟ್ಟು ಗೋಧಿ ಸಂಗ್ರಹವು ಹಿಂದಿನ ಹಂಗಾಮಿಗಿಂತ ಕನಿಷ್ಠ 20 ಲಕ್ಷ ಮೆಟ್ರಿಕ್ ಟನ್ ಹೆಚ್ಚಲಿದೆ ಎಂದು ಅವರು ಹೇಳಿದರು.
ರೈತರಿಗೆ ಎಂಎಸ್‌ಪಿ ಪಾವತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಸಚಿವರು, ಹಿಂದಿನ ವರ್ಷದ ಎಲ್ಲ ದಾಖಲೆಗಳನ್ನು ಮುರಿದು ಶುಕ್ರವಾರದವರೆಗೆ 5,72,822 ರೈತರಿಗೆ 18,366 ಕೋಟಿ ರೂ.ಗಳನ್ನು ಪಾವತಿಸಲು ಬಿಡುಗಡೆ ಮಾಡಲಾಗಿದೆ ಮತ್ತು ಖರೀದಿಸಿದ 48 ಗಂಟೆಗಳಲ್ಲಿ ರೈತರಿಗೆ ಹಣ ಪಾವತಿಯಾಗುವಂತೆ ಖಾತ್ರಿಪಡಿಸಲಾಗುತ್ತಿದೆ. ಗೋಧಿ ಸಂಗ್ರಹಣೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಖಾತ್ರಿಪಡಿಸಿಕೊಳ್ಳಲು ರಾಜ್ಯದಲ್ಲಿ ನಡೆಯುತ್ತಿರುವ ಗೋಧಿ ಖರೀದಿ ಹಂಗಾಮಿನಲ್ಲಿ ವಾಹನ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು. 30,000 ಕ್ಕೂ ಹೆಚ್ಚು ವಾಹನಗಳಿಗೆ ಈವರೆಗೆ ಜಿಪಿಎಸ್ ಅಳವಡಿಸಲಾಗಿದ ಮತ್ತು ವಾಹನ ಟ್ರ್ಯಾಕಿಂಗ್ ವ್ಯವಸ್ಥೆಯ ಮೂಲಕ 2,02,250 ಕ್ಕೂ ಹೆಚ್ಚು ಆನ್‌ಲೈನ್ ಗೇಟ್ ಪಾಸ್‌ಗಳನ್ನು ನೀಡಲಾಗಿದೆ.
ಮಾರ್ಚ್‌ನಲ್ಲಿ ಬೆಳೆ ಮಾಗುವ ಹಂತದಲ್ಲಿದ್ದಾಗ ಮಳೆ, ಆಲಿಕಲ್ಲು ಮಳೆ ಮತ್ತು ಗಾಳಿಯಿಂದಾಗಿ ಈ ವರ್ಷ ಗೋಧಿ ಕೊಯ್ಲು ವಿಳಂಬವಾಗಿದೆ. ಇದರಿಂದ ಒಟ್ಟು 34.9 ಲಕ್ಷ ಟನ್‌ಗಳಷ್ಟು ಗೋಧಿ-ಬಿತ್ತನೆಯ ಪ್ರದೇಶದಲ್ಲಿ ಶೇ 40 ಕ್ಕೂ ಹೆಚ್ಚು ಬೆಳೆಯ ಮೇಲೆ ಪರಿಣಾಮ ಬೀರಿದೆ. ರಾಜ್ಯ ಸರ್ಕಾರಿ ಸ್ವಾಮ್ಯದ ನಾಲ್ಕು ಆಹಾರ ಧಾನ್ಯ ಸಂಗ್ರಹಣಾ ಏಜೆನ್ಸಿಗಳಾದ ಪುಂಗ್‌ರೇನ್, ಪುನ್‌ಸಪ್, ಮಾರ್ಕ್‌ಫೆಡ್ ಮತ್ತು ಪಂಜಾಬ್ ಸ್ಟೇಟ್ ವೇರ್‌ಹೌಸಿಂಗ್ ಕಾರ್ಪೊರೇಷನ್ ಮತ್ತು ಕೇಂದ್ರ ಸರ್ಕಾರದ ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ (ಎಫ್‌ಸಿಐ) ಒಟ್ಟು 99.56 ಲಕ್ಷ ಟನ್‌ಗಳನ್ನು ಗೋಧಿಯನ್ನು ಖರೀದಿಸಿವೆ. ಆದಾಗ್ಯೂ, ಬೆಳೆ ಖರೀದಿ ಪ್ರಕ್ರಿಯೆಯು ನಿಧಾನ ಗತಿಯಲ್ಲಿ ಸಾಗುತ್ತಿದೆ. ಇನ್ನೂ 58.09 ಲಕ್ಷ ಟನ್‌ಗಳಷ್ಟು ಗೋಧಿಯು ಮಂಡಿಗಳಿಂದ ಶೇಖರಣಾ ಗೋಡೌನ್‌ಗಳಿಗೆ ಸ್ಥಳಾಂತರವಾಗಲು ಕಾಯುತ್ತಿದೆ.
ಗೋಧಿ ಬೆಳೆಗಾರರಿಗೆ ಕನಿಷ್ಠ ಬೆಂಬಲ ಬೆಲೆಯಾಗಿ (ಎಂಎಸ್‌ಪಿ) ಪ್ರತಿ ಕ್ವಿಂಟಲ್‌ಗೆ ₹2,125 ನೀಡಲಾಗುತ್ತಿದ್ದು, ಒಟ್ಟು ₹15,167.38 ಕೋಟಿ ಪಾವತಿಯಾಗಿದೆ. ಇಲ್ಲಿಯವರೆಗಿನ ಆಗಮನದ ಲೆಕ್ಕಾಚಾರದ ಪ್ರಕಾರ- ಸಂಗ್ರೂರ್ ಜಿಲ್ಲೆ 10 ಲಕ್ಷ ಟನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಪಟಿಯಾಲ 8.5 ಲಕ್ಷ ಟನ್, ಫಿರೋಜ್‌ಪುರ ಮತ್ತು ಲುಧಿಯಾನ ತಲಾ 7 ಲಕ್ಷ ಟನ್, ಬಟಿಂಡಾ 6.7 ಲಕ್ಷ ಟನ್, ಮುಕ್ತ್ಸರ್ 6.2 ಲಕ್ಷ ಟನ್, ತರನ್ ತಾರನ್ 6 ಲಕ್ಷ ಟನ್, ಮೊಗಾ 6 ಲಕ್ಷ ಟನ್. 5.8 ಲಕ್ಷ ಟನ್, ಮಾನ್ಸಾ ಮತ್ತು ಫಾಜಿಲ್ಕಾ ತಲಾ 5 ಲಕ್ಷ ಟನ್, ಅಮೃತಸರ 4.3 ಲಕ್ಷ ಟನ್ ಮತ್ತು ಗುರುದಾಸ್ಪುರ 4 ಲಕ್ಷ ಟನ್. ರೂಪನಗರ ಮತ್ತು ಮೊಹಾಲಿ ಜಿಲ್ಲೆಗಳು ತಲಾ 1.3 ಲಕ್ಷ ಟನ್‌ಗಳಷ್ಟು ಗೋಧಿಯನ್ನು ಕಳುಹಿಸಿವೆ.
ಇದನ್ನೂ ಓದಿ : ಪಾಕಿಸ್ತಾನದಲ್ಲಿ ಉಚಿತ ಗೋಧಿ ಹಿಟ್ಟು ಪಡೆಯಲು ನೂಕುನುಗ್ಗಲು; ಕಾಲ್ತುಳಿತಕ್ಕೆ 11 ಜನ ಸಾವು