ನವದೆಹಲಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ಲಿಂಗಾನುಪಾತದಲ್ಲಿ ಹೆಚ್ಚಳ ಕಂಡಿದೆ. ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಳವಾಗಿದೆ ಎಂದು ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಇಲಾಖೆ ಸಮೀಕ್ಷೆ-5 ರ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ತಿಳಿಸಿದ್ದಾರೆ.
ಭಾರತದ ಲಿಂಗಾನುಪಾತದಲ್ಲಿ ಭಾರಿ ಸುಧಾರಣೆ: ಪುರುಷರಿಗಿಂತ ಹೆಚ್ಚಾಯ್ತು ಮಹಿಳೆಯರ ಸಂಖ್ಯೆ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್
ಭಾರತದ ಲಿಂಗಾನುಪಾತದಲ್ಲಿ ಸುಧಾರಣೆ ಕಂಡುಬಂದಿದೆ. 1,000 ಪುರುಷರಿಗೆ 1020 ಮಹಿಳೆಯರು ಎಂದು ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಇಲಾಖೆ ಸಮೀಕ್ಷೆ-5 ರ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (2019-21) ಐದನೇ ಸುತ್ತಿನ ಪ್ರಕಾರ, ದೇಶದ ಜನಸಂಖ್ಯೆಯ ಲಿಂಗಾನುಪಾತವು (1,000 ಪುರುಷರಿಗೆ 1020 ಮಹಿಳೆಯರು) ಎಂದು ಅಂದಾಜಿಸಲಾಗಿದೆ. ಇದು ಜನಸಂಖ್ಯಾ ಬದಲಾವಣೆಯ ಸೂಚಕವಾಗಿದೆ ಎಂದಿದ್ದಾರೆ.
'ಬೇಟಿ ಬಚಾವೋ ಬೇಟಿ ಪಡಾವೋ' (ಬಿಬಿಬಿಪಿ) ಯೋಜನೆಯೊಂದಿಗೆ ಮಕ್ಕಳ ಲಿಂಗಾನುಪಾತದಲ್ಲಿ ಸುಧಾರಣೆ ಹಾಗೂ ಮಹಿಳಾ ಸಬಲೀಕರಣದ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲಾಗುತ್ತಿದೆ. ಯೋಜನೆಯಡಿ ಅನೇಕ ಅಭಿಯಾನಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆಗಳ ಜಂಟಿ ಚಿಂತನೆಯ ಫಲವಾಗಿ ಈ ಯೋಜನೆ ರೂಪಿಸಲಾಗಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.