ಹೈದರಾಬಾದ್:ಭಾರತದ ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಜರುಗಿದ ಎಂದಿಗೂ ಮರೆಯಲಾಗದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು ಇಂದಿಗೆ 102 ವರ್ಷಗಳು ಸಂದಿವೆ. 102 ವರ್ಷಗಳ ಹಿಂದೆ ಈ ದಿನ ಅಂದರೆ 1919ರ ಏಪ್ರಿಲ್ 13ರಂದು ಪಂಜಾಬ್ನ ಅಮೃತಸರದ ಜಲಿಯನ್ ವಾಲಾ ಬಾಗ್ ಪ್ರದೇಶದಲ್ಲಿ ಬ್ರಿಟಿಷರ ಗುಂಡಿನ ದಾಳಿಗೆ ನೂರಾರು ಅಮಾಯಕ ಜನರು ಬಲಿಯಾಗಿದ್ದರು.
ಭಾರತೀಯ ಕ್ರಾಂತಿಕಾರಿಗಳು ಮತ್ತು ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡ ಜನರಿಗೆ ಗೌರವ ಸೂಚಿಸುವ ಸಲುವಾಗಿ 1951ರಲ್ಲಿ ಭಾರತ ಸರ್ಕಾರ ಸ್ಮಾರಕ ಸ್ಥಾಪಿಸಿತು. ಇದು ಹೋರಾಟ ಮತ್ತು ತ್ಯಾಗದ ಸಂಕೇತವಾಗಿದ್ದು, ಯುವಜನತೆಯಲ್ಲಿ ದೇಶಪ್ರೇಮವನ್ನು ಹುಟ್ಟುಹಾಕುತ್ತಿದೆ. ಘಟನೆಯ ನೆನಪಿನಲ್ಲಿ 'ಯಾಡ್-ಇ-ಜಲಿಯನ್' ಎಂಬ ವಸ್ತು ಸಂಗ್ರಹಾಲಯವನ್ನೂ ಸ್ಥಾಪಿಸಲಾಗಿದೆ.
ಅಂದು ನಡೆದಿದ್ದೇನು?
1919ರ ಮಾರ್ಚ್ 10 ರಂದು ಬ್ರಿಟಿಷರು ಜಾರಿಗೆ ತಂದ ರೌಲಟ್ ಕಾಯ್ದೆ ವಿರುದ್ಧ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗಿತ್ತು. ಮಹಾತ್ಮ ಗಾಂಧಿ ಇದನ್ನು ವಿರೋಧಿಸಿ ಸತ್ಯಾಗ್ರಹ ಪ್ರಾರಂಭಿಸಿದರು. ಏಕೆಂದರೆ ಈ ಕಾಯ್ದೆ ಅಡಿ ಯಾವುದೇ ವ್ಯಕ್ತಿಯನ್ನು ಯಾವುದೇ ಸಮಯದಲ್ಲಿ ದೇಶದ್ರೋಹದ ಅಡಿಯಲ್ಲಿ ಬಂಧಿಸಲು ಬ್ರಿಟಿಷ್ ಸರ್ಕಾರಕ್ಕೆ ಅಧಿಕಾರ ನೀಡಲಾಗಿತ್ತು. ಅದೇ ವರ್ಷ ಏಪ್ರಿಲ್ 7 ರಂದು ಗಾಂಧೀಜಿ ರೌಲಟ್ ಕಾಯ್ದೆಯನ್ನು ವಿರೋಧಿಸುವ ಮಾರ್ಗಗಳನ್ನು ವಿವರಿಸುವ 'ಸತ್ಯಾಗ್ರಹಿ' ಎಂಬ ಲೇಖನವನ್ನು ಪ್ರಕಟಿಸಿದ್ದರು.