ನವದೆಹಲಿ:ಕೋವಿಡ್ ವಿರುದ್ಧ ಹೋರಾಡಲು ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಕೊರೊನಾ ಸೋಂಕು ನಿರೋಧಕವಾಗಿ ಕೆಲಸ ಮಾಡಬಲ್ಲ 2-ಡಿಆಕ್ಸಿ-ಡಿ-ಗ್ಲೂಕೋಸ್ (2-DG) ಔಷಧದ ಮೊದಲ ಡೋಸ್ ಅನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಳಗ್ಗೆ 10.30ಕ್ಕೆ ಬಿಡುಗಡೆಗೊಳಿಸಲಿದ್ದಾರೆ. 10 ಸಾವಿರ ಡೋಸ್ಗಳನ್ನು ಸಚಿವರು ಇದೇ ವೇಳೆ ದೆಹಲಿಯ ವಿವಿಧ ಆಸ್ಪತ್ರೆಗಳಿಗೆ ವಿತರಿಸಲಿದ್ದಾರೆ.
ಡಿಆರ್‌ಡಿಒ-ರೆಡ್ಡೀಸ್ ಲ್ಯಾಬೊರೇಟರೀಸ್ ಜಂಟಿಯಾಗಿ ಅಭಿವೃದ್ಧಿ
2-ಡಿಆಕ್ಸಿ-ಡಿ-ಗ್ಲೂಕೋಸ್ ಅಥವಾ 2-DG ಎಂದು ಕರೆಯಲ್ಪಡುವ ಈ ಔಧಿಯನ್ನು ಹೈದರಾಬಾದ್ ಮೂಲದ ಫಾರ್ಮಾ ದೈತ್ಯ ಡಾ.ರೆಡ್ಡಿಸ್ ಲ್ಯಾಬೊರೇಟರೀಸ್ ಸಹಯೋಗದೊಂದಿಗೆ ಡಿಆರ್‌ಡಿಒ ಲ್ಯಾಬ್ ತಯಾರಿಸಿದೆ. ದೇಶದ ಔಷಧ ನಿಯಂತ್ರಕ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ತುರ್ತು ಬಳಕೆಗಾಗಿ ಈ ಔಷಧಿಯನ್ನು ಈಗಾಗಲೇ ಅನುಮೋದಿಸಿದೆ.
ಕೋವಿಡ್ ರೋಗಿಗಳಿಗೆ ಅನುಕೂಲವೇನು?
ಕಳೆದ ವರ್ಷ ಮೇ ಮತ್ತು ಅಕ್ಟೋಬರ್ ತಿಂಗಳ ನಡುವೆ ನಡೆಸಿದ 2 ನೇ ಹಂತದ ಕ್ಲಿನಿಕಲ್ ಪ್ರಯೋಗಗಳಲ್ಲಿ ಕೊರೊನಾ ರೋಗಿಗಳಿಗೆ ಈ ಔಷಧಿ ಸುರಕ್ಷಿತವಾಗಿದೆ ಎಂದು ಕಂಡುಬಂದಿದೆ. ಕೋವಿಡ್ ರೋಗಿಗಳ ಆಸ್ಪತ್ರೆಗೆ ದಾಖಲಾಗುವುದನ್ನು ಕಡಿಮೆ ಮಾಡಲು ಮತ್ತು ಅವರ ಪೂರಕ ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡಲು ಇದು ಪರಿಣಾಮಕಾರಿ ಎಂದು ತಿಳಿದುಬಂದಿದೆ.
ಔಷಧವು ಪುಡಿ ರೂಪದಲ್ಲಿ ಸ್ಯಾಚೆಟ್‌ಗಳಲ್ಲಿ ಲಭ್ಯವಿರಲಿದೆ. ಇದನ್ನು ನೀರಿನಲ್ಲಿ ಕರಗಿಸಿ ಮೌಖಿಕವಾಗಿ ತೆಗೆದುಕೊಳ್ಳಲಾಗುತ್ತದೆ. ಇದನ್ನು ತೆಗೆದುಕೊಂಡಾಗ, ಇದರ ಪ್ರಭಾವ ವೈರಸ್ ಸೋಂಕಿತ ಜೀವಕೋಶವನ್ನು ತಲುಪುತ್ತದೆ. ಔಷಧದಲ್ಲಿರುವ ಸುಡೋ ಗ್ಲೂಕೋಸ್ ಅಣುವು ವೈರಲ್ ಸಂಶ್ಲೇಷಣೆ ಮತ್ತು ಶಕ್ತಿಯ ಉತ್ಪಾದನೆಯನ್ನು ನಿಲ್ಲಿಸುವ ಮೂಲಕ ವೈರಸ್ ಬೆಳವಣಿಗೆಯನ್ನು ತಡೆಯುತ್ತದೆ.
ಇದನ್ನೂ ಓದಿ:ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಕೋವಿಡ್ ಔಷಧಕ್ಕೆ ಡಿಸಿಜಿಐ ಅನುಮೋದನೆ
ಕೊರೊನಾಗೆ ಚಿಕಿತ್ಸೆ ನೀಡಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿರುವ ಕೆಲವೇ ಕೆಲವು ಔಷಧಿಗಳಲ್ಲಿ 2-DG ಸಹ ಒಂದು. ಏಪ್ರಿಲ್ 2020ರಲ್ಲಿ ಕೋವಿಡ್ ಸೋಂಕಿನ ವಿರುದ್ಧ ವಿಜ್ಞಾನಿಗಳು ಹೈದರಾಬಾದ್ನ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ ಸಹಾಯದಿಂದ ಪ್ರಯೋಗ ನಡೆಸಿದ್ದರು. ಅದರಲ್ಲಿ ಇದು ಯಶಸ್ವಿಯಾಗಿದೆ. ಈ ಫಲಿತಾಂಶ ಆಧರಿಸಿ ಡಿಸಿಜಿಐ ಕೋವಿಡ್ ರೋಗಿಗಳ ಮೇಲೆ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಮೇ 2020ರಲ್ಲಿ ನಡೆಸಿತು.
2020ರ ನವೆಂಬರ್ ತಿಂಗಳಲ್ಲಿ 3ನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ಅನುಮತಿ ನೀಡಲಾಗಿತ್ತು. ದೆಹಲಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್,ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯದ ಕೋವಿಡ್ ಆಸ್ಪತ್ರೆಗಳಲ್ಲಿ ಮಾರ್ಚ್ 2021ರವರೆಗೆ 3ನೇ ಹಂತದ ಪ್ರಯೋಗ ನಡೆಸಲಾಗಿತ್ತು. ಬಳಿಕ ಇದರ ತುರ್ತು ಬಳಕೆಗೆ ಡಿಸಿಜಿಐಗೆ ಅನುಮತಿ ನೀಡಿತು.