ಪಾಟ್ನಾ, ಬಿಹಾರ: ಈಗಾಗಲೇ ಒಮಿಕ್ರೋನ್ ವೈರಸ್ ಜಗತ್ತಿನಾದ್ಯಂತ ಆತಂಕ ಸೃಷ್ಟಿಸುತ್ತಿದೆ. ಭಾರತಕ್ಕೆ ಓಮಿಕ್ರೋನ್ ಬರದಂತೆ ತಡೆಯಲು ಕೇಂದ್ರ ಸರ್ಕಾರವೂ ಕೂಡಾ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ತಪಾಸಣೆ ಮಾಡಿ, ಸೋಂಕು ಪರೀಕ್ಷೆ ಮಾಡಲಾಗುತ್ತದೆ. ಆದರೆ ಬಿಹಾರಕ್ಕೆ ಆಫ್ರಿಕನ್ ರಾಷ್ಟ್ರಗಳಿಂದ ಬಂದ ನೂರು ಮಂದಿ ಕಾಣೆಯಾಗಿದ್ದಾರೆ.
ಹೌದು, ಒಮಿಕ್ರೋನ್ ಕಾಣಿಸಿಕೊಂಡ ಆಫ್ರಿಕಾದ ದಕ್ಷಿಣ ಭಾಗದ ಕೆಲವು ರಾಷ್ಟ್ರಗಳಿಂದ ಬಿಹಾರಕ್ಕೆ ಬಂದ 281 ಮಂದಿಯಲ್ಲಿ ಸುಮಾರು 100 ಮಂದಿ ಕಾಣೆಯಾಗಿದ್ದು, ಪಾಸ್ಪೋರ್ಟ್ನಲ್ಲಿ ನಮೂದಿಸಿರುವ ವಿಳಾಸದಲ್ಲಿ ಅವರನ್ನು ಪತ್ತೆ ಹಚ್ಚಲು ಬಿಹಾರ ರಾಜ್ಯ ಆರೋಗ್ಯ ಇಲಾಖೆಗೆ ಸಾಧ್ಯವಾಗುತ್ತಿಲ್ಲ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.